ಹಣಕಾಸು ಸಚಿವ ಪ್ರಣವ್ ಮುಖರ್ಜಿ 2008-09ನೇ ಸಾಲಿನ ಆರ್ಥಿಕ ಸಮೀಕ್ಷೆಯನ್ನು ಗುರುವಾರ ಲೋಕಸಭೆಯಲ್ಲಿ ಮಂಡನೆ ಮಾಡಿದ್ದು, ತೆರಿಗೆಗಳ ಮೇಲಿನ ಮೇಲ್ತೆರಿಗೆ ಮತ್ತು ಸೆಸ್ ಹಾಗೂ ಹೆಚ್ಚುವರಿ ಸೌಲಭ್ಯ ತೆರಿಗೆ ವಿಧಿಸುವುದನ್ನು ತೆಗೆಯಬೇಕೆಂದು ಶಿಫಾರಸು ಮಾಡಿದೆ.
ಪೆಟ್ರೋಲ್ ದರಗಳು ಮತ್ತು ಹಣಕಾಸು ಕ್ಷೇತ್ರದಲ್ಲಿ ವ್ಯಾಪಕ ಸುಧಾರಣೆಗಳಿಗೆ ಸಮೀಕ್ಷೆಯಲ್ಲಿ ಶಿಫಾರಸು ಮಾಡಲಾಗಿದೆ.2009-10ರ ಕೇಂದ್ರ ಬಜೆಟ್ ಮಂಡನೆಗೆ ಮುನ್ನ, ಎಲ್ಲ ಮೇಲ್ತೆರಿಗೆ ಮತ್ತು ಸರ್ಜಾರ್ಜ್‌ಗೆ ತೆರೆಎಳೆಯಲು ಮತ್ತು ರಾಸಾಯನಿಕ ಗೊಬ್ಬರಗಳಿಗೆ ಮತ್ತು ಇಂಧನಗಳಿಗೆ ಮುಕ್ತಬೆಲೆ ವಿಧಿಸಲು ಸಮೀಕ್ಷೆ ಶಿಫಾರಸು ಮಾಡಿದೆ.
ಆರ್ಥಿಕತೆಯನ್ನು ಮತ್ತೆ ಬೆಳವಣಿಗೆಯ ಹಳಿ ಮೇಲೆ ತರಲು ಬಂಡವಾಳ ಹಿಂತೆಗೆತ ಮತ್ತು ವಿತ್ತಕ್ಷೇತ್ರಗಳ ಸುಧಾರಣೆಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಸಮೀಕ್ಷೆ ಸಲಹೆ ಮಾಡಿದೆ. ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಲೀಟರ್‌ಗೆ ಕ್ರಮವಾಗಿ 4 ರೂ. ಮತ್ತು 2 ರೂ. ಏರಿಕೆ ಮಾಡಿದ ಮರುದಿನವೇ ಇಂಧನ ದರಗಳನ್ನು ಸರ್ಕಾರದ ನಿಯಂತ್ರಣದಿಂದ ತೆಗೆಯಬೇಕೆಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಮೇಲ್ತೆರಿಗೆ, ಸೆಸ್, ವಹಿವಾಟು ತೆರಿಗೆಗಳು ಮತ್ತು ಹೆಚ್ಚುವರಿ ಸೌಲಭ್ಯ ತೆರಿಗೆಗಳ ಪುನರ್ಪರಿಶೀಲನೆ ಮತ್ತು ಹಂತ, ಹಂತವಾಗಿ ತೆಗೆಯಲು ಅದು ಸಲಹೆ ಮಾಡಿದ್ದು, ವಿತ್ತೀಯ ಕ್ಷೇತ್ರದ ಸುಧಾರಣೆಗಳು ಮತ್ತು ಕೃಷಿ ಕ್ಷೇತ್ರದ ವ್ಯಾಪಾರದಲ್ಲಿ ಎಲ್ಲ ನಿರ್ಬಂಧಗಳನ್ನು ತೆಗೆಯಲು ಸಮೀಕ್ಷೆ ಸಲಹೆ ಮಾಡಿದೆ.ರೈಲ್ವೆ, ಕಲ್ಲಿದ್ದಲು ಮತ್ತು ಪರಮಾಣು ಶಕ್ತಿ ಕ್ಷೇತ್ರಗಳಲ್ಲಿ ಏಕಸ್ವಾಮ್ಯತೆ ಅಂತ್ಯಗೊಳಿಸಿ ರಕ್ಷಣೆ ಮತ್ತು ವಿಮೆಯಲ್ಲಿ ಶೇ. 49 ವಿದೇಶಿ ಹೂಡಿಕೆಗೆ ಕೋರಿಕೆ ಸಲ್ಲಿಸಿದೆ.
ಇಂಧನ ಸಬ್ಸಿಡಿಗಳನ್ನು ತೆಗೆಯುವುದು ಸೇರಿದಂತೆ ಮೂಲಸೌಲಭ್ಯ ಅಭಿವೃದ್ಧಿ ಚುರುಕುಗೊಳಿಸುವುದರ ಜತೆ ವ್ಯಾಪಕ ಸುಧಾರಣೆ ಕ್ರಮಗಳಿಂದ ಶೇ. 7 ಪ್ರಗತಿದರ ನಿರೀಕ್ಷಿಸಬಹುದು ಎಂದು ಸಮೀಕ್ಷೆ ತಿಳಿಸಿದೆ. ಹಣದುಬ್ಬರ ಚಿಂತಿಸುವ ವಿಷಯವಲ್ಲ ಎಂದು ಹೇಳಲಾಗಿದ್ದು, ಶೇ.3 ವಿತ್ತೀಯ ಕೊರತೆಯ ಗುರಿಯನ್ನು ತುರ್ತಾಗಿ ತಲುಪಲು ಸಲಹೆ ಮಾಡಿದೆ. |