ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆಹಾರ ಬೆಲೆ ಏರಿಕೆಯಿಂದ ಪ್ರಗತಿಗೆ ಅಡ್ಡಿ: ವಿತ್ತ ಸಮೀಕ್ಷೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಹಾರ ಬೆಲೆ ಏರಿಕೆಯಿಂದ ಪ್ರಗತಿಗೆ ಅಡ್ಡಿ: ವಿತ್ತ ಸಮೀಕ್ಷೆ
ಹಣದುಬ್ಬರ ದರದ ಋಣಾತ್ಮಕ ಚಲನೆಗೆ ಕಾರಣವಾಗಿರುವ ಜಾಗತಿಕ ತೈಲ ಬೆಲೆ ಮತ್ತು ಆವಶ್ಯಕ ವಸ್ತುಗಳ ಬೆಲೆ ಕುಸಿತದ ಭಾರೀ ಲಾಭದ ಹೊರತಾಗಿಯೂ, ದೇಶದಲ್ಲಿನ ಆಹಾರವಸ್ತುಗಳ ಬೆಲೆಯೇರಿಕೆಯು ಆರ್ಥಿಕ ಪ್ರಗತಿಗೆ ಅಡ್ಡಿಯಾಗಲಿದೆ ಎಂದು ಎಂದು ಆರ್ಥಿಕ ಸಮೀಕ್ಷೆ ಆತಂಕ ವ್ಯಕ್ತಪಡಿಸಿದೆ.

"ಆಹಾರ ಹಣದುಬ್ಬರ ದರ ಮುಂದುವರಿಕೆಯು ಸಮಗ್ರ ಅಭಿವೃದ್ಧಿಗೆ ತಡೆಯಾಗುತ್ತದೆ, ಅದರಲ್ಲಿಯೂ ಬಡತನ ನಿರ್ಮೂಲನೆಯ ಶ್ರಮಗಳಿಗೆ ಅಡ್ಡಿಯಾಗಬಹುದು" ಎಂದು ಸಂಸತ್ತಿನಲ್ಲಿ ಮಂಡಿಸಲಾಗಿರುವ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿದೆ.

ಜೂನ್ 6ಕ್ಕೆ ಕೊನೆಗೊಂಡ ವಾರದಲ್ಲಿ (-)1.61, ಜೂನ್ 13ಕ್ಕೆ (-)1.14 ಹಾಗೂ ಜೂನ್ 20ಕ್ಕೆ ಅಂತ್ಯಗೊಂಡ ವಾರದಲ್ಲಿ (-) 1.3ರ ಹಣದುಬ್ಬರ ಸಗಟು ಸೂಚ್ಯಂಕ ದಾಖಲಾಗಿದೆ.

ಜಾಗತಿಕ ಬೇಡಿಕೆ ಕುಸಿತದ ಮುನ್ಸೂಚನೆ ಮತ್ತು ಹೊಸ ತೈಲ ನಿಕ್ಷೇಪಗಳ ನಿರ್ಮಾಣದ ಹೊರತಾಗಿಯೂ ತೈಲ ಬೆಲೆಯೇರಿಕೆಯ ಹಿಂದೆ ಆರ್ಥಿಕ ಬಂಡವಾಳಶಾಹಿಗಳು ಕೈ ಆಡಿಸುತ್ತಿರಬಹುದು. ಇದರೊಂದಿಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯೂ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಬಹುದು ಎಂದು ಸಮೀಕ್ಷೆಯು ಎಚ್ಚರಿಕೆ ನೀಡಿದೆ.

ಅದೇ ಹೊತ್ತಿಗೆ, ಸಗಟು ದರ ಸೂಚ್ಯಂಕದ ಆಧಾರದಲ್ಲಿ ಅಳೆಯಲಾಗುವ ದೇಶೀಯ ಆಹಾರ ದರದ ಹಣದುಬ್ಬರವು ಒಟ್ಟಾರೆ ಹಣದುಬ್ಬರಕ್ಕಿಂತ ಸಾಕಷ್ಟು ಮೇಲ್ಮಟ್ಟದಲ್ಲಿದೆ ಎಂದು ಅದು ಹೇಳಿದೆ.

ಕಳೆದ ವರ್ಷದ ಅಕ್ಟೋಬರ್ ತಿಂಗಳಿಂದೀಚೆಗೆ ಎರಡಂಕಿ ಹಣದುಬ್ಬರ ದಾಖಲಿಸಿದ್ದ ಗುಂಪಿನಲ್ಲಿ ಆಹಾರ ಧಾನ್ಯ, ಫಲವಸ್ತು, ತರಕಾರಿ, ಇತರ ಆಹಾರ ಪದಾರ್ಥಗಳು, ಉಪ್ಪು ಮತ್ತು ಸಕ್ಕರೆಗಳು ಸೇರಿವೆ ಎಂದೂ ಅದು ಹೇಳಿದೆ.

ಸಮೀಕ್ಷೆಯಲ್ಲಿ ನಮೂದಿಸಲಾಗಿರುವ ಮುಖ್ಯಾಂಶಗಳು:

- ಉಪತೆರಿಗೆ (ಸೆಸ್), ಸರ್ಚಾರ್ಜ್ ಮತ್ತು ವಹಿವಾಟು ತೆರಿಗೆಗಳನ್ನು ವಾಪಸು ಪಡೆಯುವುದು. ಸರಕು ಸಾಗಣೆ ತೆರಿಗೆ, ಭದ್ರತಾ ನಿರ್ವಹಣೆ ತೆರಿಗೆ ಮತ್ತು ಹೆಚ್ಚುವರಿ ಸೌಲಭ್ಯಗಳ ತೆರಿಗೆಗಳು ವಹಿವಾಟು ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ.

- ನಿಷ್ಪಕ್ಷಪಾತ ಕಾರ್ಪೊರೇಟ್ ತೆರಿಗೆಯನ್ನು ಬಿಂಬಿಸುವ ಹೊಸ ಆದಾಯ ತೆರಿಗೆ ನೀತಿಯನ್ನು ಪರಿಚಯಿಸುವುದು.

- 2009-10ರ ಹಣಕಾಸು ವರ್ಷದಲ್ಲಿ ಶೇಕಡಾ 7ರಿಂದ 7.5 ಪ್ರಗತಿ ಸಾಧ್ಯತೆ.

- ರಕ್ಷಣೆ ಮತ್ತು ವಿಮಾ ಕ್ಷೇತ್ರದಲ್ಲಿ ಶೇ.49ರಷ್ಟು ವಿದೇಶೀ ನೇರ ಬಂಡವಾಳ (ಎಫ್‌ಡಿಐ)ಕ್ಕೆ ಅನುಮತಿ, ಚಿಲ್ಲರೆ ಮಳಿಗೆಯಲ್ಲಿಯೂ ಎಫ್‌ಡಿಐಗೆ ಅವಕಾಶ.

- ತೆರಿಗೆ ಕಡಿತ ಮತ್ತು ವೆಚ್ಚ ಹೆಚ್ಚಳದೊಂದಿಗೆ ಮತ್ತೊಂದು ಸುತ್ತಿನ ಆರ್ಥಿಕ ಪುನಶ್ಚೇತನ ಪ್ಯಾಕೇಜ್ ಪ್ರಸ್ತಾಪ.

- ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಿಯಂತ್ರಣ ಬಿಟ್ಟು ಕೊಡುವುದು. ರೈಲ್ವೇ, ಕಲ್ಲಿದ್ದಲು ಮತ್ತು ಪರಮಾಣು ಶಕ್ತಿಯ ಮೇಲಿನ ಸರಕಾರದ ಏಕಸ್ವಾಮ್ಯವನ್ನು ಕೊನೆಗೊಳಿಸುವುದು.

- ದರಗಳ ಸ್ಥಿರತೆಗಾಗಿ ಭವಿಷ್ಯದ ಗುತ್ತಿಗೆಗಳ ಮೇಲಿನ ಎಲ್ಲಾ ನಿಷೇಧಗಳನ್ನು ತೆರವುಗೊಳಿಸುವುದು. ಸಕ್ಕರೆ ಮತ್ತು ರಾಸಾಯನಿಕ ಗೊಬ್ಬರಗಳ ಮೇಲಿನ ನಿಯಂತ್ರಣವನ್ನು ಕೈ ಬಿಡುವುದು.

- ಎಲ್ಲಾ ಸಾರ್ವಜನಿಕ ಸ್ವಾಮ್ಯ ಸಂಸ್ಥೆಗಳನ್ನು (ಪಿಎಸ್‌ಯು) ಪಟ್ಟಿ ಮಾಡುವುದು ಮತ್ತು ಪುನಶ್ಚೇತನ ಮಾಡಲು ಅಸಾಧ್ಯವಾಗಿರುವುದನ್ನು ಹರಾಜು ಮಾಡಿ, ಬಂಡವಾಳ ಹಿಂತೆಗೆತ ಕ್ರಮಗಳಿಗೆ ಮತ್ತೆ ಜೀವ ತುಂಬುವ ಮೂಲಕ 25,000 ಕೋಟಿ ರೂಪಾಯಿಗಳನ್ನು ವಾರ್ಷಿಕವಾಗಿ ಹೊಂದಿಸುವುದು.

- ಆರ್ಥಿಕ ಪ್ರಗತಿಯು 2007-08ರಲ್ಲಿದ್ದ ಶೇಕಡಾ 9ರಿಂದ 2008-09ರ ಸಾಲಿನಲ್ಲಿ ಶೇಕಡಾ 6.7ಕ್ಕೆ ಕುಗ್ಗಿದೆ.

- ಆರ್ಥಿಕ ಕೊರತೆಯು 2007-08ರ ಅವಧಿಯ ಶೇಕಡಾ 2.7ಕ್ಕಿಂತ 2008-09ರ ಸಾಲಿನಲ್ಲಿ ಶೇಕಡಾ 6ಕ್ಕೆ ಏರಿದೆ.

- ಲಾಭದಾಯಕವೆಂದು ಗುರುತಿಸಲಾದ 'ನವರತ್ನ'ವಲ್ಲದ ಪಿಎಸ್‌ಯುದಲ್ಲಿನ ಶೇಕಡಾ 5ರಿಂದ 10 ಶೇರುಗಳನ್ನು ಮಾರುವ ಕಾರ್ಯವನ್ನು ಸಂಪೂರ್ಣಗೊಳಿಸುವುದು.

- ಬಹಿರಂಗವಾಗದಿರುವ ಪಿಎಸ್‌ಯುಗಳನ್ನು ಪಟ್ಟಿ ಮಾಡಿ ಕನಿಷ್ಠ ಶೇಕಡಾ 10ರಷ್ಟು ಶೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವುದು.

- ಪುನಶ್ಚೇತನಗೊಳಿಸಲಾಗದ ನಷ್ಟದಲ್ಲಿರುವ ಪಿಎಸ್‌ಯುಗಳನ್ನು ಹರಾಜು ಹಾಕುವುದು.

- ಮೂರನೇ ಪೀಳಿಗೆ ವಲಯ (3ಜಿ ಸ್ಪೆಕ್ಟ್ರಮ್) ಹರಾಜು.

- ಹರಾಜು ಮಾಡಲಾದ ಸ್ಪೆಕ್ಟ್ರಮ್ ಅನಿರ್ಬಂಧಿತ ವ್ಯವಹಾರಕ್ಕೆ ಮುಕ್ತವಾಗಿರಬೇಕು. ಜತೆಗೆ ಸ್ಪೆಕ್ಟ್ರಮ್‌ನ ಮೇಲಿನ ಬಂಡವಾಳ ಗಳಿಕೆಗೆ ಆದಾಯ ತೆರಿಗೆ ನೀತಿಯಡಿಯಲ್ಲಿ ತೆರಿಗೆ ವಿಧಿಸುವುದು.

- ಸೋರಿಕೆ ಕಡಿಮೆ ಮಾಡಲು ಮತ್ತು ಉದ್ದೇಶ ಈಡೇರಿಕೆ ಖಚಿತಪಡಿಸಿಕೊಳ್ಳಲು, ಪೆಟ್ರೋಲಿಯಂ (ಎಲ್‌ಪಿಜಿ, ಸೀಮೆಎಣ್ಣೆ), ರಸ ಗೊಬ್ಬರಗಳ ಮತ್ತು ಆಹಾರ ವಸ್ತುಗಳ ಸಹಾಯಧನ ನೀತಿಯಲ್ಲಿ ಸುಧಾರಣೆ.

- ಗೃಹಬಳಕೆಯ ಎಲ್‌ಪಿಜಿಯ ಮೇಲಿನ ಸಬ್ಸಿಡಿ ದರವನ್ನು ವರ್ಷದಲ್ಲಿ ಗರಿಷ್ಠ ಆರರಿಂದ ಎಂಟು ಸಿಲಿಂಡರ್‌ಗಳಿಗೆ ಸೀಮಿತಗೊಳಿಸುವುದು.

- ಗ್ರಾಮಾಂತರ ಪ್ರದೇಶದ ಪ್ರತಿ ಮನೆಗಳಲ್ಲಿ ಸೌರಶಕ್ತಿ ಕುಕ್ಕರ್ ಮತ್ತು ಸೌರದೀಪಗಳಿರುವಂತೆ ನೋಡಿಕೊಳ್ಳುವ ಮೂಲಕ, ಸೀಮೆಎಣ್ಣೆ ಮತ್ತು ಅದರ ಮೇಲಿನ ಸಬ್ಸಿಡಿಯನ್ನು ಕ್ರಮೇಣ ಕಡಿಮೆ ಮಾಡುತ್ತಾ ಬರುವುದು.

- ಸರಕು ಮತ್ತು ಸೇವಾ ತೆರಿಗೆಯನ್ನು ಏಪ್ರಿಲ್ 1, 2010ರಿಂದ ಜಾರಿಗೆ ತರುವುದು.

- ಮೂರು ತಿಂಗಳುಗಳೊಳಗೆ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವನ್ನು ಚುರುಕುಗೊಳಿಸುವುದು.

- ಕೃಷಿ ಅಭಿವೃದ್ಧಿ ದರವು 2008-09ರ ಸಾಲಿನಲ್ಲಿ ಶೇಕಡಾ 1.6ಕ್ಕೆ ಕುಸಿದಿದೆ. ಅದಕ್ಕೂ ಮೊದಲು ಇದರ ಪ್ರಮಾಣ ಶೇಕಡಾ 4.9 ಆಗಿತ್ತು.

- ರಫ್ತು ವ್ಯವಹಾರದಲ್ಲಿ ಶೇಕಡಾ 3.4ರ ಪ್ರಗತಿ ಕಂಡು ಬಂದಿದ್ದು, 2008-09ರ ಸಾಲಿನಲ್ಲಿ 168 ಬಿಲಿಯನ್ ಡಾಲರ್‌ಗಳನ್ನು ತಲುಪಿದೆ. ಈ ಹಿಂದಿನ ಹಣಕಾಸು ವರ್ಷದಲ್ಲಿದು 163 ಬಿಲಿಯನ್ ಡಾಲರ್‌ಗಳಾಗಿತ್ತು.

- ಆಮದು ಪ್ರಮಾಣದಲ್ಲಿ ಶೇಕಡಾ 14.3ರ ಏರಿಕೆ ಕಂಡು ಬಂದಿದ್ದು 287.75 ಬಿಲಿಯನ್ ಡಾಲರ್‌ಗಳಾಗಿವೆ. ಕಳೆದ ವರ್ಷ ಇದು 251.65 ಬಿಲಿಯನ್ ಡಾಲರುಗಳಾಗಿತ್ತು.

- ಆಮದು ರಫ್ತುಗಳಲ್ಲಿನ ವ್ಯತ್ಯಾಸವು ಈ ಬಾರಿ ಮತ್ತಷ್ಟು ಕುಸಿತ ಕಂಡಿದೆ. ಕಳೆದ ಬಾರಿ 88.52 ಬಿಲಿಯನ್ ಡಾಲರುಗಳಾಗಿದ್ದರೆ ಈ ಬಾರಿಯದ್ದು 119.05 ಬಿಲಿಯನ್ ಡಾಲರ್ ತಲುಪುವ ಮೂಲಕ ಪಾತಾಳ ಸೇರಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೇಲ್ತೆರಿಗೆ, ಸೆಸ್ ತೆಗೆಯಲು ಆರ್ಥಿಕ ಸಮೀಕ್ಷೆ ಶಿಫಾರಸು
ಮೂರನೇ ವಾರವೂ ಮುಂದುವರಿದ ಹಣದುಬ್ಬರ ಕುಸಿತ
ಜನಸ್ನೇಹಿ ಬಜೆಟ್ : ಮಮತಾ ಭರವಸೆ
ಪ್ರವಾಸೋದ್ಯಮ ಚೇತರಿಕೆಗೆ ಹೊಸ ಯೋಜನೆ
ಜನಪರ ಬಜೆಟ್: ಮಮತಾ ಭರವಸೆ
ಪೆಟ್ರೋಲ್ ಲೀಟರ್‌ಗೆ 4 ರೂ. ಡೀಸೆಲ್ 2 ರೂ. ಹೆಚ್ಚಳ