ನಿಗದಿಯಂತೆ ವೇತನ ನೀಡಲು ನಿರಾಕರಿಸಿರುವ ಏರ್ ಇಂಡಿಯಾ ನಿರ್ಧಾರದ ವಿರುದ್ಧ ನೌಕರರು ಶುಕ್ರವಾರ ಎರಡು ಗಂಟೆಗಳ ಕಾಲ ಮುಷ್ಕರ ನಡೆಸುವ ಬೆದರಿಕೆ ಹಾಕಿದ್ದಾರೆ.
ನಿಗದಿಯಂತೆ ಶುಕ್ರವಾರ ವೇತನ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಏರ್ ಇಂಡಿಯಾ ಪ್ರಕಟಿಸಿದ ಬೆನ್ನಿಗೆ ನೌಕರರಿಂದ ಈ ಹೇಳಿಕೆ ಹೊರ ಬಿದ್ದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಏರ್ ಇಂಡಿಯಾ ಸಿಬಂದಿಗಳು, ತಾವು ಶುಕ್ರವಾರದಂದು ಮಧ್ಯಾಹ್ನ 2ರಿಂದ 4 ಗಂಟೆಯವರೆಗೆ ಪ್ರತಿಭಟನೆ ನಡೆಸುತ್ತೇವೆ. ಬೇಡಿಕೆ ಈಡೇರದಿದ್ದರೆ ಅದು ಅನಿರ್ದಿಷ್ಟಾವಧಿಗೆ ಪರಿವರ್ತನೆಗೊಳ್ಳಬಹುದು ಎಂದು ಬೆದರಿಕೆ ಹಾಕಿದ್ದಾರೆ.
ಪ್ರತೀ ಬಾರಿಯೂ ಏರ್ ಇಂಡಿಯಾಕ್ಕೆ ಬೈಲೌಟ್ ಕೊಡಲು ಸರಕಾರಕ್ಕೆ ಸಾಧ್ಯವಿಲ್ಲ. ತನ್ನ ಖರ್ಚುವೆಚ್ಚಗಳನ್ನು ಸ್ಥಿಮಿತದಲ್ಲಿಟ್ಟುಕೊಳ್ಳುವ ಮೂಲಕ ಆರ್ಥಿಕ ಸಮಸ್ಯೆಗಳನ್ನು ರಾಷ್ಟ್ರೀಯ ವಿಮಾನಯಾನ ಸಂಸ್ಥೆಯೇ ಬಗೆಹರಿಸಿಕೊಳ್ಳಬೇಕು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಹೇಳಿಕೆ ನೀಡಿದ ನಂತರ ಪ್ರತಿಭಟನಾ ನಿರ್ಧಾರವನ್ನು ನೌಕರರು ಪ್ರಕಟಿಸಿದ್ದಾರೆ.
ನವೆಂಬರ್ 2007ರ ಹೊತ್ತಿಗೆ 6,550 ಕೋಟಿ ರೂಪಾಯಿ ಸಾಲ ಹೊಂದಿದ್ದ ಏರ್ ಇಂಡಿಯಾ ಜೂನ್ ತಿಂಗಳ ಅವಧಿಗೆ 15,241 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿಕೊಂಡಿದೆ.
ಯೋಜನೆಗಳನ್ನು 30 ದಿನಗಳೊಳಗಾಗಿ ಪುನರ್ ರೂಪಿಸಲು ಸಿದ್ಧತೆ ನಡೆಸುವಂತೆ ಏರ್ ಇಂಡಿಯಾಕ್ಕೆ ಸೂಚಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ಸಚಿವರು, ನಿರ್ವಹಣಾ ವೆಚ್ಚ ಮತ್ತು ಹೊಸ ವಿಮಾನಗಳ ಖರೀದಿಗಾಗಿ ಏರ್ ಇಂಡಿಯಾವು ಭಾರೀ ಪ್ರಮಾಣದಲ್ಲಿ ಸಾಲಗಳನ್ನು ಮಾಡಿದೆ. ಇದು ಪ್ರಸಕ್ತ ಆರ್ಥಿಕ ಕುಸಿತ ಮತ್ತು ಕಳೆದ ವರ್ಷದ ತೈಲ ಬೆಲೆಗಳ ಹೆಚ್ಚಳದಿಂದಾಗಿ ಇನ್ನಷ್ಟು ಜಟಿಲವಾಗಿದೆ. ಈ ಸಂಬಂಧ ಸಲಹೆಗಳನ್ನು ನೀಡುವಂತೆ ಭಾರತೀಯ ವೈಮಾನಿಕ ಕಂಪನಿಗೆ (ಎನ್‌ಎಸಿಐಎಲ್) ಸೂಚಿಸಲಾಗಿದೆ ಎಂದರು.
ಅದೇ ಹೊತ್ತಿಗೆ ಅವರು ಏರ್ ಇಂಡಿಯಾದ ಯಾವುದೇ ಸಿಬಂದಿಗಳನ್ನು ವಜಾ ಮಾಡುವ ಉದ್ದೇಶವನ್ನು ತಾವು ಹೊಂದಿರಲಿಲ್ಲ ಎಂದು ಪಟೇಲ್ ಸ್ಪಷ್ಟಪಡಿಸಿದ್ದಾರೆ.
|