2006ರಲ್ಲಿ ತೆರಿಗೆ ವ್ಯಾಪ್ತಿಗೆ ಬಂದಿದ್ದ ಸಹಕಾರಿ ಬ್ಯಾಂಕುಗಳೀಗ ತೆರಿಗೆ ವಿನಾಯಿತಿಗಾಗಿ ಸರಕಾರವನ್ನು ಒತ್ತಾಯಿಸಿದ್ದು, ಮುಂಬರುವ ಬಜೆಟ್‌ನಲ್ಲಿ ನಿರ್ಧಾರ ಪ್ರಕಟಿಸುವಂತೆ ಆಗ್ರಹಿಸಿವೆ. ನಮ್ಮದು ಸಹಕಾರಿ ಬ್ಯಾಂಕ್ ಆಗಿರುವ ಕಾರಣ ಬ್ಯಾಂಕುಗಳ ಸ್ಥಿರ ಗಳಿಕೆಗಳನ್ನು ಲಾಭ ಎಂದು ಪರಿಗಣಿಸಬಾರದು ಎನ್ನುವುದು ಕೋ-ಆಪರೇಟಿವ್ ಬ್ಯಾಂಕ್‌ಗಳ ವಾದ.
ಸಂಸ್ಥೆಯ ನಿಯಮಾವಳಿಗಳನ್ನು ಬಜೆಟ್ ಹಿನ್ನಲೆಯಲ್ಲಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರಿಗೆ ಸಲ್ಲಿಸಿದ ನಂತರ ಪ್ರತಿಕ್ರಿಯೆ ನೀಡಿರುವ 'ನ್ಯಾಷನಲ್ ಫೆಡರೇಷನ್ ಆಫ್ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ಸ್ & ಕ್ರೆಡಿಟ್ ಸೊಸೈಟಿ'ಗಳು, ತಮ್ಮ ಆಧಾರವಾದ ಬಂಡವಾಳವನ್ನು ಹೆಚ್ಚಿಸಿಕೊಳ್ಳಲು ಸಹಕಾರಿ ಬ್ಯಾಂಕುಗಳಿಗೆ ಇರುವ ಪ್ರಮುಖ ದಾರಿಯೇ ಸ್ಥಿರ ಗಳಿಕೆ ಎಂದಿವೆ.
ಸಹಕಾರಿ ಬ್ಯಾಂಕುಗಳು ಸಣ್ಣ ಪ್ರಮಾಣದ ಸಾಲಗಳನ್ನು ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ನೀಡುತ್ತವೆ.
ಸುಮಾರು 2,000 ಸಹಕಾರಿ ಬ್ಯಾಂಕುಗಳ ಮೇಲೆ ತೆರಿಗೆ ರೂಪದಲ್ಲಿ ಸರಕಾರವು ಕ್ಷುಲ್ಲಕವೆನಿಸಬಹುದಾದ ಕೇವಲ 400 ಕೋಟಿ ರೂಪಾಯಿಗಳನ್ನು ಮಾತ್ರ ಗಳಿಸುತ್ತಿದೆ ಎಂದು ಸಹಕಾರಿ ಬ್ಯಾಂಕುಗಳ ಫೆಡರೇಷನ್ ನಿರ್ದೇಶಕ ಕೆ.ಡಿ. ವೋರಾ ತಿಳಿಸಿದ್ದಾರೆ.
ಸಚಿವರಿಗೆ ಸಲ್ಲಿಸಲಾಗಿರುವ ನಿಯಮಾವಳಿಗಳಲ್ಲಿ ಸಹಕಾರಿ ಬ್ಯಾಂಕುಗಳ ಹಲವಾರು ವಿಶೇಷತೆಗಳನ್ನು ಪಟ್ಟಿ ಮಾಡಲಾಗಿದೆ. ಅಲ್ಲದೆ ಸರಕಾರವು ತನ್ನ ಹತೋಟಿಯನ್ನು ಕೈ ಬಿಡುವಂತೆಯೂ ಆಗ್ರಹಿಸಲಾಗಿದೆ.
|