15 ನೇ ಲೋಕಸಭೆಯ ಪ್ರಪ್ರಥಮ ರೈಲ್ವೆ ಬಜೆಟ್ ಶುಕ್ರವಾರ ಮಧ್ನಾಹ್ನ ನೂತನ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಅವರು ಮಂಡಿಸಲಿದ್ದು, ತಮ್ಮ ಬಜೆಟ್ ಸರಳ ಹಾಗೂ ಜನಪರವಾಗಲಿದೆ ಎಂದು ಹೇಳಿಕೊಂಡಿದ್ದಾರೆ.ತಾವು ಮಂಡಿಸುವ ಬಜೆಟ್ ಬಗ್ಗೆ ಜನರ ನಿರೀಕ್ಷೆ ಅತಿಯಾಗಿದೆ ಎಂದು ಬ್ಯಾನರ್ಜಿ ತಿಳಿಸಿದ್ದಾರೆ. ಪ್ಯಾಸೆಂಜರ್ ರೈಲು ಮತ್ತು ಸೂಪರ್ ಫಾಸ್ಟ್ ರೈಲುಗಳ ಪ್ರಯಾಣ ದರವನ್ನು ಪರಿಷ್ಕರಿಸುವ ಸಾಧ್ಯತೆ ಇದೆ. ತತ್ಕಾಲ್ ಸ್ಕೀಂ ದರವನ್ನು ಪ್ರಯಾಣಿಕ ಸ್ನೇಹಿಯಾಗಿ ಬದಲಿಸುವ ಸಾಧ್ಯತೆ ಇದೆ.ರೈಲು ನಿಲ್ದಾಣಗಳಲ್ಲಿ ಪೂರಿ, ಸಾಗುವಿನಂತಹ ಕಡಿಮೆ ದರದ ಆಹಾರ ಪದಾರ್ಥಗಳನ್ನು ಮರು ಜಾರಿಗೊಳಿಸುವ ಸಾಧ್ಯತೆಯಿದೆ. ಪಶ್ಚಿಮಬಂಗಾಳದ ಸೀಲ್ಡಾ ನಿಲ್ದಾಣವನ್ನು ವಿಶ್ವದರ್ಜೆಗೆ ಆಧುನೀಕರಣಗೊಳಿಸುವ ಬಗ್ಗೆ ಘೋಷಣೆ ಮಾಡುವ ಸಂಭವವಿದೆ.ಈ ಹಿಂದಿನ ರೈಲ್ವೆ ಸಚಿವರಾಗಿದ್ದ ಲೂಲು ಪ್ರಸಾದ್ ಯಾದವ್ ಅವರು ತಮ್ಮ ಸ್ವಕ್ಷೇತ್ರವಾದ ಪಾಟ್ನಾಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಇದೀಗ ನೂತನ ಸಚಿವೆ ಮಮತಾ ಬಂಗಾಳಕ್ಕೆ ಆದ್ಯತೆ ನೀಡುವತ್ತ ಚಿತ್ತ ಹರಿಸಿದ್ದಾರೆ. ಆದರೆ ಈ ಬಾರಿಯ ಬಜೆಟ್‌ನಲ್ಲಿಯಾದರೂ ಕರ್ನಾಟಕದ ಬೇಡಿಕೆ ಈಡೇರುತ್ತದೆಯೇ ಎಂದು ಕಾದುನೋಡಬೇಕಾಗಿದೆ. ರೈಲ್ವೆ ರಾಜ್ಯ ಸಚಿವರಾಗಿರುವ ಕೆ.ಎಚ್.ಮುನಿಯಪ್ಪ ಕೂಡ ಈ ಬಾರಿ ರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮನವಿ ಮಾಡಲಾಗಿದೆ. ಆ ನಿಟ್ಟಿನಲ್ಲಿ ನಮ್ಮ ನಿರೀಕ್ಷೆ ಹುಸಿಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. |