ದೇಶದಲ್ಲಿನ ಮೊತ್ತ ಮೊದಲ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯ 'ದಕ್ಷಿಣ ಏಷಿಯಾ ಯುನಿವರ್ಸಿಟಿ'ಯ ಸ್ಥಾಪನೆಗಾಗಿ ಭಾರತ ಸರಕಾರವು 239.93 ಮಿಲಿಯನ್ ಡಾಲರ್ ನೀಡಲು ಒಪ್ಪಿಗೆ ಸೂಚಿಸಿದೆ.
ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸಂಪುಟ ಸಭೆಯಲ್ಲಿ ಈ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ. ಇದೀಗ ಸರಕಾರವು ಒಪ್ಪಿಗೆ ನೀಡಿರುವ ಮೊತ್ತವು ಯೋಜನೆಯ ಒಟ್ಟು ಮೊತ್ತದ ಶೇಕಡಾ 79ರಷ್ಟಾಗಿದೆ.
ಮುಂದಿನ ವರ್ಷ ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆ ಆರಂಭಿಸುವ ಸಲುವಾಗಿ ಭಾರತವು ನೀಡಲು ಒಪ್ಪಿಕೊಂಡಿರುವ ಒಟ್ಟು ಮೊತ್ತದ ಮೊದಲ ಕಂತು 9.464 ಮಿಲಿಯನ್ ಡಾಲರನ್ನು ನೀಡಲು ಸಿದ್ಧವಿದೆ ಎಂದು ಇದೇ ಸಂದರ್ಭದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ಪತ್ರಕರ್ತರಿಗೆ ತಿಳಿಸಿದ್ದಾರೆ.
2005ರ ಢಾಕಾದಲ್ಲಿನ ಸಾರ್ಕ್ ಸಮ್ಮೇಳನದಲ್ಲಿ ಪ್ರಧಾನ ಮಂತ್ರಿಯವರು ಈ ವಿಶ್ವಾವಿದ್ಯಾಲಯದ ಪ್ರಸ್ತಾಪ ಮಾಡಿದ್ದರು.
ಇದೀಗ ವಿಶ್ವವಿದ್ಯಾಲಯದ ಸ್ಥಾಪನೆಗಾಗಿ ದಕ್ಷಿಣ ದೆಹಲಿಯಲ್ಲಿ 100 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಕಾರ್ಯಕ್ಕೆ ಬಾಹ್ಯ ವ್ಯವಹಾರಗಳ ಸಚಿವಾಲಯವು ಚಾಲನೆ ನೀಡಲಿದೆ.
ಅಧ್ಯಯನ ಮತ್ತು ಸಂಶೋಧನೆಗಳಿಗಾಗಿ ಅಗಾಧ ಜ್ಞಾನ ಮತ್ತು ವ್ಯವಸ್ಥೆಗಳನ್ನು ಪೂರೈಸುವಲ್ಲಿ ಈ ಯುನಿವರ್ಸಿಟಿ ಮಹತ್ವದ ಪ್ರಭಾವ ಬೀಳಲಿದೆ ಎಂದು ಅಂದಾಜಿಸಲಾಗಿದೆ.
|