ಮೂರನೇ ಬಾರಿ ಕೇಂದ್ರ ರೈಲ್ವೇ ಸಚಿವೆಯಾಗಿ ಆಯವ್ಯಯ ಪತ್ರ ಮಂಡಿಸಿದ ಮಮತಾ ಬ್ಯಾನರ್ಜಿ ಬಡವರತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಪ್ರಯಾಣ ದರ ಹಾಗೂ ಸರಕು ಸಾಗಣಿಕೆ ದರವನ್ನು ಏರಿಸದೆ, ಇತರ ವಿಶೇಷ ರಿಯಾಯಿತಿ ದರಗಳನ್ನು ಪ್ರಕಟಿಸಿ ಗಮನ ಸೆಳೆದಿದ್ದಾರೆ.ದೇಶಾದ್ಯಂತ 57 ಹೊಸ ರೈಲುಗಳು ಹಾಗೂ ಇನ್ನಿತರ ಹಲವು ಸೂಪರ್‌ಫಾಸ್ಟ್, ತಡೆರಹಿತ ಜತೆಗೆ ಇಂಟರ್ಸಿಟಿ ಡಬಲ್ ಡೆಕ್ಕರ್ ರೈಲುಗಳು ಈ ಬಾರಿಯ ಬಜೆಟ್‌ನಲ್ಲಿ ಕಂಡು ಬಂದಿರುವ ಪ್ರಮುಖ ಅಂಶಗಳು.ಉಳಿದಂತೆ ಈ ಹಿಂದಿನ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್‌ರ 'ಗರೀಬ್ ರಥ'ವನ್ನು ಪುನರಾವರ್ತಿಸದ ಮಮತಾ, 'ಇಜ್ಜತ್', 'ಯುವ' ಯೋಜನೆಗಳನ್ನು ಜಾರಿಗೊಳಿಸಿ ನಿರೀಕ್ಷೆ ಹೆಚ್ಚಿಸಿದ್ದಾರೆ. ' ಯುವ' ರೈಲಿನಲ್ಲಿ 1,500 ಕಿ.ಮೀ. ಅಂತರದ ಪ್ರಯಾಣಕ್ಕೆ 299 ರೂಪಾಯಿಗಳನ್ನಷ್ಟೇ ಟಿಕೆಟು ದರವಿರುತ್ತದೆ. 2,500 ಕಿ.ಮೀ. ಅಂತರಕ್ಕಿಲ್ಲಿ 399 ರೂಪಾಯಿಗಳನ್ನು ವಿಧಿಸಲಾಗುತ್ತದೆ. ಅಲ್ಲದೆ ಇದು ಹವಾನಿಯಂತ್ರಿತವಾಗಿರುವುದು ವಿಶೇಷ. ಈ ರೈಲುಗಳು 1,000 ಕಿ.ಮೀ.ಯಿಂದ 2,000 ಕಿ.ಮೀ. ಅಂತರವಿರುವ ನಗರದಿಂದ ನಗರಕ್ಕೆ ಮಾತ್ರ ಲಭ್ಯ.ಅದೇ ರೀತಿ 'ಇಜ್ಜತ್' ಯೋಜನೆಯ ಪ್ರಕಾರ ತಿಂಗಳಿಗೆ 1,500 ರೂಪಾಯಿ ಸಂಪಾದನೆ ಮಾಡುವ ವ್ಯಕ್ತಿ ಕೇವಲ 25 ರೂಪಾಯಿಯಲ್ಲಿ 100 ಕಿ.ಮೀ. ಪ್ರಯಾಣಿಸಬಹುದು.ರೈತರನ್ನೂ ಗಮನದಲ್ಲಿಟ್ಟುಕೊಂಡಿರುವ ಬಜೆಟ್‌ನಲ್ಲಿ ವಿಶೇಷ ರೈಲುಗಳನ್ನೂ ಪ್ರಕಟಿಸಲಾಗಿದೆ. ಅಲ್ಲದೆ ಕೃಷ್ಯುತ್ಪನ್ನಗಳನ್ನು ಕೆಡದಂತೆ ರಕ್ಷಿಸುವ ಶೀತಲೀಕರಣ ವ್ಯವಸ್ಥೆ, ರೈತರಿಗೆ ವಿಶೇಷ ರಿಯಾಯಿತಿ ದರವನ್ನೂ ಸೇರಿಸಲಾಗಿದೆ.ಭದ್ರತೆಗೆ ಹೆಚ್ಚಿನ ಒತ್ತು...ಪ್ರಯಾಣಿಕರ ಭದ್ರತೆಗೆ ಮಮತಾ ಮುತುವರ್ಜಿ ವಹಿಸಿದ್ದಾರೆ. ಅದರಲ್ಲೂ ಮಹಿಳೆಯರಿಗೆ ಭದ್ರತಾ ವಿಭಾಗಗಳಲ್ಲಿ ಅವಕಾಶ ನೀಡುವ ಮಾತುಗಳು ಬಜೆಟ್‌ನಲ್ಲಿ ಹೊರ ಬಿದ್ದಿವೆ. ಪ್ರಯಾಣಿಕರ ಸುರಕ್ಷತೆಯೇ ಮೊದಲ ಆದ್ಯತೆ ಎಂದು ಘೋಷಿಸಿರುವ ಮಮತಾ, ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಮುಂಜಾಗ್ರತೆ ಹೆಚ್ಚಿಸಲಾಗುತ್ತದೆ ಎಂದಿದ್ದಾರೆ.ವಿಶ್ವದರ್ಜೆ ಮತ್ತು ಉನ್ನತ ದರ್ಜೆಗೆ ರೈಲು ನಿಲ್ದಾಣಗಳನ್ನು ಏರಿಸುವುದೆಂದರೆ ಆಧುನೀಕರಣ ಸೌಲಭ್ಯಗಳೊಂದಿಗೆ ಗರಿಷ್ಠ ಭದ್ರತಾ ಕ್ರಮಗಳನ್ನು ಕಲ್ಪಿಸಲಾಗುವುದೆಂದೇ ಅರ್ಥ.ಅಲ್ಲದೆ 140 ಸೂಕ್ಷ್ಮ ರೈಲು ನಿಲ್ದಾಣಗಳಲ್ಲಿ ಸುಧಾರಿತ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳುವ ನಿರ್ಧಾರವನ್ನೂ ಮಮತಾ ಪ್ರಕಟಿಸಿದ್ದಾರೆ.ಮಹಿಳೆ, ಅಂಗವಿಕಲರು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ...ಉದ್ಯೋಗಗಳಲ್ಲಿ ಅದರಲ್ಲೂ ಕಮಾಂಡೋ ಪಡೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಯೋಜನೆಯನ್ನೂ ಮಮತಾ ಪ್ರಕಟಿಸಿ ಗಮನ ಸೆಳೆದಿದ್ದಾರೆ.ಮುಂಬೈಯಲ್ಲಿರುವಂತೆ ಮಹಿಳೆಯರಿಗಾಗಿಯೇ ವಿಶೇಷ ರೈಲು ಪ್ರಕಟಿಸಿರುವುದು ಹೊಸ ಮೈಲುಗಲ್ಲು. ಆದರೆ ಇದು ಪ್ರಮುಖ ನಗರಗಳಾದ ಕೊಲ್ಕತ್ತಾ, ಚೆನ್ನೈ, ದೆಹಲಿಯಲ್ಲಿ ಮಾತ್ರ ಲಭ್ಯ. ಆದರೂ ಇತರೆಡೆ ಮಹಿಳೆಯರಿಗಾಗಿ ವಿಶೇಷ ಸಂದರ್ಭಗಳಲ್ಲಿ ವಿಶೇಷ ರೈಲುಗಳನ್ನು ಮಹಿಳೆಯರಿಗಾಗಿ ಬಿಡಲಾಗುತ್ತದೆ.ರೈಲು ನಿಲ್ದಾಣಗಳಲ್ಲಿ ಮಹಿಳೆಯರಿಗೆ ವಿಶೇಷ ವಿಶ್ರಾಂತಿ ಕೊಠಡಿ ಸ್ಥಾಪಿಸುವ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ. ಇವೆಲ್ಲದರ ಜತೆ ಮಹಿಳೆಯರ ಸುರಕ್ಷಿತ ಪ್ರಯಾಣಕ್ಕೂ ಕ್ರಮಗಳನ್ನು ಪ್ರಕಟಿಸಲಾಗಿದೆ.ಅಂಗವಿಕಲರು, ಹಿರಿಯ ನಾಗರಿಕರಿಗೆ ವಿಶೇಷ ಬೋಗಿಗಳನ್ನು ಮೀಸಲಿಡಲಾಗುತ್ತದೆ. ಅಲ್ಲದೆ ಅವರಿಗೆ ರಿಯಾಯಿತಿ ದರವನ್ನೂ ಘೋಷಿಸಲಾಗಿದೆ.ವಿದ್ಯಾರ್ಥಿಗಳಿಗೆ ಈ ಹಿಂದಿದ್ದ ಪಾಸ್ ವ್ಯವಸ್ಥೆಯನ್ನು ಇದ್ದಂತೆ ಮುಂದುವರಿಸಲಾಗಿದೆ. ಅದನ್ನು ಮದರಸ ವಿದ್ಯಾರ್ಥಿಗಳಿಗೂ ವಿಸ್ತರಿಸಿರುವುದು ಗಮನಾರ್ಹ.ಪತ್ರಕರ್ತರಿಗೆ ಮತ್ತು ಅವರ ಪತ್ನಿಯರಿಗೆ ಶೇಕಡಾ 30ರಿಂದ 50ರವರೆಗೆ ರಿಯಾಯಿತಿ ದರದಲ್ಲಿ ಪ್ರಯಾಣಕ್ಕೆ ಅವಕಾಶ ನೀಡುವ ಪ್ರಸ್ತಾಪವನ್ನೂ ಮಮತಾ ಮಾಡಿದ್ದಾರೆ.ತತ್ಕಾಲ್ ಇಳಿಕೆತತ್ಕಾಲ್ ಕಾದಿರಿಸುವಿಕೆ ದರವನ್ನು 150ರಿಂದ 100 ರೂ.ಗೆ ಹಾಗೂ ಮುಂಗಡ ಕಾದಿರಿಸುವಿಕೆ ಸಮಯವನ್ನು ಐದರಿಂದ 2 ದಿನಗಳಿಗೆ ಇಳಿಕೆ ಮಾಡಲಾಗಿದೆ. ದೇಶದ 500 ಅಂಚೆ ಕಚೇರಿಗಳಲ್ಲಿ ಟಿಕೆಟ್ ವ್ಯವಸ್ಥೆ, ಸಂಚಾರಿ ವಾಹನಗಳ ಮೂಲಕ ಟಿಕೆಟ್ ಮಾರಾಟ, ಇ-ಟಿಕೆಟ್ ಸರಳೀಕರಣ ಮತ್ತು ವೆಚ್ಚ ಕಡಿತ, 200 ಟಿಕೆಟ್ ವಿತರಣಾ ಯಂತ್ರಗಳ ಸ್ಥಾಪನೆ ಮುಂತಾದುವುದು ಟಿಕೆಟ್ ವಿಭಾಗದಲ್ಲಿ ಪ್ರಕಟಿಸಿರುವ ಹೊಸ ಯೋಜನೆಗಳು.ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವ ನಿಟ್ಟಿನಲ್ಲಿ 'ಜನತಾ' ಯೋಜನೆ, ಶುದ್ಧ ನೀರು ಪೂರೈಕೆ ಭರವಸೆ, ಸ್ವಚ್ಛತೆಗೆ ಒತ್ತು, ಪರಿಸರ ಸ್ನೇಹಿ ಶೌಚಾಲಯಗಳ ನಿರ್ಮಾಣ ಮುಂತಾದ ಹತ್ತು ಹಲವು ಧನಾತ್ಮಕ ಅಂಶಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. |