ಕಳೆದ ಹಣಕಾಸು ವರ್ಷದಲ್ಲಿ 36,773 ಕೋಟಿ ರೂಪಾಯಿಗಳನ್ನು ಹೂಡಿದ್ದ ದೇಶದ ಬಹುದೊಡ್ಡ ಲಾಭದಾಯಕ ಸಂಸ್ಥೆಗಳಲ್ಲೊಂದಾದ ಭಾರತೀಯ ರೈಲ್ವೇಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ 40,745 ಕೋಟಿ ರೂ.ಗಳನ್ನು ವಿವಿಧ ಕಾರ್ಯಗಳಿಗಾಗಿ ವಿನಿಯೋಗಿಸಲಿದೆ.ಇದಲ್ಲದೆ ರೈಲ್ವೇ ಅಧ್ಯಯನಕ್ಕಾಗಿ 12,393 ಕೋಟಿ ರೂ., ರಸ್ತೆ ಸುರಕ್ಷತಾ ಕಾಮಗಾರಿಗಳಿಗಾಗಿ ಅಂದರೆ ಮೇಲ್ಸೇತುವೆ ಮತ್ತು ಕೆಳ ಸೇತುವೆಗಳು ಹಾಗೂ ಮಾರ್ಗಗಳಿಗಾಗಿ 5,135 ಕೋಟಿ ರೂ. ಖರ್ಚು ಮಾಡಲಿದೆ ಎಂದು 2009-10ರ ಬಜೆಟ್‌ನಲ್ಲಿ ತಿಳಿಸಲಾಗಿದೆ. ಗೇಜ್ ಪರಿವರ್ತನೆಗಾಗಿ 1,906 ಕೋಟಿ ರೂಪಾಯಿ ಹಾಗೂ ಯಂತ್ರ ಮತ್ತು ಕಾರ್ಖಾನೆಗಳಿಗೆ 1,797 ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ ಎಂದೂ ಪ್ರಕಟಿಸಿದೆ.ಶಿಥಿಲವಾಗಿರುವ ಸಾಲುಗಳ ಮರುಜೋಡಣೆಗಾಗಿ ರೈಲ್ವೇ ಬಜೆಟಿನಲ್ಲಿ ಸಚಿವೆ ಮಮತಾ ಬ್ಯಾನರ್ಜಿಯವರು 2,054 ಕೋಟಿ ರೂ.ಗಳನ್ನು ಮೀಸಲಿಡುವುದಾಗಿ ತಿಳಿಸಿದ್ದಾರೆ. ಹೊಸ ಹಳಿ ನಿರ್ಮಾಣಕ್ಕಾಗಿ 2,921.70 ಕೋಟಿ ರೂಪಾಯಿಗಳನ್ನು ವ್ಯಯಿಸುವ ನಿರ್ಧಾರಕ್ಕೂ ಅವರು ಬಂದಿದ್ದಾರೆ.ಅಲ್ಲದೆ ರೈಲ್ವೇ ನೌಕರರು ಮತ್ತು ಪ್ರಯಾಣಿಕರಿಗೆ ಸವಲತ್ತುಗಳನ್ನು ಒದಗಿಸುವ ಸಲುವಾಗಿ 1,526 ಕೋಟಿ ರೂಪಾಯಿಗಳನ್ನು ತೆಗೆದಿಡಲಾಗಿದೆ.ರೈಲ್ವೇ ಇಂಜಿನ್‌ಗಳಿಗಾಗಿ 4,247.28 ಕೋಟಿ ರೂ. ಹಾಗೂ ರೈಲು ಗಾಡಿಗಳಿಗಾಗಿ 3,616.61 ಕೋಟಿ ರೂಪಾಯಿಗಳನ್ನು ಇಲಾಖೆಯು ವೆಚ್ಚ ಮಾಡಲಿದೆ.ಕಳೆದ ಬಾರಿ 11,066 ಕೋಟಿ ರೂ. ಲಾಭಗಳಿಸಿದ್ದ ರೈಲ್ವೇ ಇಲಾಖೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ 8,121 ಕೋಟಿ ರೂಪಾಯಿಗಳ ಲಾಭದ ಲೆಕ್ಕಾಚಾರ ಹಾಕಿದೆ. ಇದಕ್ಕಾಗಿ 82,504 ಕೋಟಿ ರೂ.ಗಳನ್ನು ರೈಲ್ವೇ ವೆಚ್ಚ ಮಾಡಲಿದೆ. |