ಆಡಳಿತ ಮಂಡಳಿಯ ಕಠಿಣ ಸಂದೇಶದ ಹೊರತಾಗಿಯೂ 'ಏರ್ ಇಂಡಿಯಾ' ಸಿಬಂದಿಗಳು ವಿಳಂಬ ವೇತನವನ್ನು ಖಂಡಿಸಿ ದೇಶದಾದ್ಯಂತ ಎರಡು ಗಂಟೆಗಳ ಮುಷ್ಕರ ನಡೆಸಿದ್ದಾರೆ.
ರಾಷ್ಟ್ರೀಯ ವಿಮಾನಯಾನ ಸಂಸ್ಥೆ 'ಏರ್ ಇಂಡಿಯಾ' ಈ ಹಿಂದೆ ಹೇಳಿದಂತೆ ಸಂಭಾವನೆಯನ್ನು ನೀಡದ ಕಾರಣಕ್ಕೆ ಸಿಬಂದಿಗಳು ಮಧ್ಯಾಹ್ನ ಒಂದು ಗಂಟೆಯ ನಂತರ ಪ್ರತಿಭಟನೆ ನಡೆಸಿದರು.
"ನಾವು ಎರಡು ಗಂಟೆಗಳ ಮುಷ್ಕರ ನಡೆಸಿದ್ದೇವೆ. ಈ ಚಳುವಳಿಯನ್ನು ಇದೇ ರೀತಿ ನಾಳೆ ಕೂಡ ಮುಂದುವರಿಸಲಿದ್ದೇವೆ" ಎಂದು ಏರ್ ಇಂಡಿಯಾ ಉದ್ಯೋಗಿಗಳ ಅತಿ ದೊಡ್ಡ ಸಂಘಟನೆ 'ಏರ್ ಕಾರ್ಪೊರೇಷನ್ ಎಂಪ್ಲಾಯಿಸ್ ಯೂನಿಯನ್' (ಎಸಿಇಯು) ಜಂಟಿ ಕಾರ್ಯದರ್ಶಿ ಆನಂದ್ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನೆ ನಡೆಸುವ ನೌಕರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅವರ ವೇತನವನ್ನೂ ತಡೆ ಹಿಡಿಯಲಾಗುತ್ತದೆ. ಅವರು ನಡೆಸುವ ಪ್ರತಿಭಟನೆಯಿಂದ ವಿಮಾನ ಹಾರಾಟ ಸಮಯಕ್ಕೆ ಯಾವುದೇ ತೊಂದರೆಯಾಗದು ಎಂದು ಏರ್ ಇಂಡಿಯಾ ಆಡಳಿತ ಹೇಳಿತ್ತು.
ಅವರು ಒಂದೆರಡು ದಿನಗಳಲ್ಲಿ ಸಂಭಾವನೆ ಪಡೆಯಲಿದ್ದಾರೆ. ಒಂದೆರಡು ದಿನಗಳ ವಿಳಂಬಕ್ಕಾಗಿ ನೌಕರರು ಪ್ರತಿಭಟನೆ, ಮುಷ್ಕರ ನಡೆಸುವುದರಲ್ಲಿ ಅರ್ಥವಿಲ್ಲ. ಯಾರಿಗೆ ಮೊದಲು ವೇತನ ನೀಡಬೇಕೆಂಬುದನ್ನು ಗುರುತಿಸಬೇಕಾದ ಕಾರಣದಿಂದ ಪ್ರಸಕ್ತ ವಿಳಂಬತೆ ತಲೆದೋರಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಆದರೆ ಇವ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದ ಸಂಘಟನೆಗಳು, ದೇಶಾದ್ಯಂತದ ಎಲ್ಲಾ ವಿಮಾನ ನಿಲ್ದಾಣಗಳಲ್ಲೂ ಪ್ರತಿಭಟನೆ ಮುಂದುವರಿಸಲಿದ್ದೇವೆ ಎಂದಿದ್ದಾರೆ. ಹಾಗೊಂದು ವೇಳೆ ಆಡಳಿತ ಮಂಡಳಿಯು ಎರಡು ದಿನದ ನಂತರ ವೇತನ ನೀಡುವುದಾದಲ್ಲಿ ಲಿಖಿತ ಭರವಸೆ ನೀಡಲಿ ಎಂದೂ ಅವರು ತಿಳಿಸಿದ್ದಾರೆ.
|