ದೇಶದ ಅತಿದೊಡ್ಡ ಕಾರು ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್ ವಿಶ್ವದಲ್ಲೇ ಅತೀ ಅಗ್ಗದ ಕಾರು ಎಂದು ಹೆಸರುಗಳಿಸಿರುವ 'ನ್ಯಾನೋ'ವನ್ನು ಮುಂದಿನ 18 ತಿಂಗಳೊಳಗೆ ಆಫ್ರಿಕಾದ ರಸ್ತೆಗಳಿಗಿಳಿಸುವ ಯೋಜನೆ ಹಾಕಿಕೊಂಡಿದೆ.
ಭಾರತದ ಮಾರುಕಟ್ಟೆಯ ಬೆಲೆಯಲ್ಲಿ ಟಾಟಾದ ಎನ್‌ಜಿಎನ್ 360 ಮಾದರಿಯ ನ್ಯಾನೋ ಕಾರು ನೈಜೀರಿಯಾದಲ್ಲಿ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಭಾರತದಲ್ಲಿ ನ್ಯಾನೋದ ಮೂರು ಮಾದರಿಯ ಕಾರುಗಳು 1.23 ಲಕ್ಷದಿಂದ 1.72 ಲಕ್ಷ ರೂಪಾಯಿಗಳೊಳಗೆ ಗ್ರಾಹಕರಿಗೆ ಸಿಗಲಿದೆ.
"ಮುಂದಿನ ಒಂದೆರಡು ವರ್ಷದೊಳಗೆ ಟಾಟಾ ಮೋಟಾರ್ಸ್‌ನ ನ್ಯಾನೋ ಕಾರು ನೈಜೀರಿಯಾದಲ್ಲಿ ಲಭ್ಯವಾಗಲಿದೆ" ಎಂದು ಟಾಟಾ ಆಫ್ರಿಕಾ ನೈಜೀರಿಯಾದ ಹಿರಿಯ ಅಧಿಕಾರಿ ಸುದೀಪ್ ರಾಯ್ ತಿಳಿಸಿದ್ದಾರೆ.
"ನ್ಯಾನೋ ಕಾರು ನೈಜೀರಿಯಾದಲ್ಲಿ 357,480 ಎನ್‌ಜಿಎನ್‌ಗಳಿಗೆ (ನೈಜೀರಿಯನ್ ನೈರ್) ಅಂದರೆ ಭಾರತದ 1.16 ಲಕ್ಷ ರೂಪಾಯಿಗಳಿಗೆ ಸಿಗಲಿದೆ. ಇದು ಇಲ್ಲಿ ಲಭ್ಯವಿರುವ ಸೆಕೆಂಡ್ ಹ್ಯಾಂಡ್ ಕಾರಿಗಿಂತಲೂ ಕಡಿಮೆ" ಎಂದು ರಾಯ್ ವಿವರಿಸಿದ್ದಾರೆ.
ನೈಜೀರಿಯಾದಲ್ಲಿ ಬಳಸಿದ ಕಾರಿನ ಬೆಲೆ ಆರಂಭವಾಗುವುದೇ 500,000 ಎನ್‌ಜಿಎನ್‌ಗಳಿಂದ. ಹಾಗಾಗಿ ನ್ಯಾನೋ ಕಾರಿಗೆ ಭಾರೀ ಬೇಡಿಕೆಯಿದೆ ಎಂಬುದು ಕಂಪನಿಯ ಅಂದಾಜು.
ಅದೇ ಹೊತ್ತಿಗೆ ಜಗತ್ತಿನ ಅತೀ ಅಗ್ಗದ ಕಾರನ್ನು ನೈಜೀರಿಯಾದಲ್ಲಿ ಜೋಡಿಸಿ ಮಾರಲಾಗುತ್ತದೆಯೇ ಅಥವಾ ಸಂಪೂರ್ಣ ಘಟಕವನ್ನೇ ಅಲ್ಲಿ ಸ್ಥಾಪಿಸಿದ ನಂತರ ಮಾರಲಾಗುತ್ತದೆಯೇ ಎಂಬ ವಿವರಗಳನ್ನು ನೀಡಲು ರಾಯ್ ನಿರಾಕರಿಸಿದ್ದಾರೆ.
|