ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗಿರುವುದರಿಂದ ತಕ್ಷಣಕ್ಕೆ ಬಸ್ ಅಥವಾ ಟ್ಯಾಕ್ಸಿ ಪ್ರಯಾಣ ದರದಲ್ಲಿ ಹೆಚ್ಚಳ ಮಾಡುವ ಸಾಧ್ಯತೆಯನ್ನು ಪಶ್ಚಿಮ ಬಂಗಾಲ ಸರಕಾರ ತಳ್ಳಿ ಹಾಕಿದೆ.
ಬಸ್ ಸಂಘಟನೆಗಳ ಜಂಟಿ ಸಮಿತಿಯ ಜತೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯ ಪರಿಣಾಮಗಳ ಕುರಿತು ಮಾತುಕತೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತಾ ರಾಜ್ಯದ ಸಾರಿಗೆ ಸಚಿವ ಸುಭಾಷ್ ಚಕ್ರವರ್ತಿ, ಇಂಧನ ಬೆಲೆಯನ್ನು ಇಳಿಸುವಂತೆ ಕೇಂದ್ರ ಸರಕಾರದ ಮೇಲೆ ಪ್ರಭಾವ ಬೀರುವಂತೆ ಕರೆಯಿತ್ತರು.
ಈ ಸಂಬಂಧ ಯುಪಿಎ ಸರಕಾರವನ್ನು ಒತ್ತಾಯಿಸುವಂತೆ ನನ್ನನ್ನು ಭೇಟಿ ಮಾಡಿದ ಯುಪಿಎ ಸದಸ್ಯರಿಗೆ ಹೇಳಿದ್ದೇನೆ ಎಂದು ಚಕ್ರವರ್ತಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಗಳ ಬೆಲೆಯೇರಿಕೆಯ ಕಾರಣದಿಂದಾಗಿ ಕೇಂದ್ರ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ ನಾಲ್ಕು ಮತ್ತು ಎರಡು ರೂಪಾಯಿಗಳಂತೆ ಏರಿಕೆ ಮಾಡಿತ್ತು.
ಹಾಗಾಗಿ ರಾಜ್ಯಗಳು ಸಾರಿಗೆ ವಿಚಾರದಲ್ಲಿ ದರಯೇರಿಕೆಯ ಒತ್ತಡವನ್ನೆದುರಿಸುತ್ತಿವೆ. ಈ ಸಂಬಂಧ ಬಂಗಾಲವು ಈಗಾಗಲೇ ಪ್ರಯಾಣ ದರ ಏರಿಕೆಯನ್ನು ನಿರಾಕರಿಸಿದರೂ ಇತರ ರಾಜ್ಯಗಳಲ್ಲಿ ದನಿಯೇರುವ ಲಕ್ಷಣಗಳು ಗೋಚರಿಸುತ್ತಿವೆ.
|