ಕುಮಾರಿ ಮಮತಾ ಬ್ಯಾನರ್ಜಿ ಮಂಡಿಸಿರುವ ರೈಲ್ವೇ ಬಜೆಟನ್ನು 'ಸಂಪೂರ್ಣ ಮಿಥ್ಯೆ' ಹಾಗೂ 'ವಿಚಿತ್ರ'ವಾದದ್ದು ಎಂದು ಬಿಜೆಪಿ ಹಾಗೂ ಎಡಪಕ್ಷಗಳು ತೀವ್ರವಾಗಿ ಟೀಕಿಸಿವೆ.
ಬಜೆಟ್ ಬಗ್ಗೆ ಪ್ರತಿಕ್ರಿಯಿಸುತ್ತಾ ಭಾರತೀಯ ಜನತಾ ಪಕ್ಷದ ಸಂಸತ್ ಉಪನಾಯಕಿ ಸುಷ್ಮಾ ಸ್ವರಾಜ್ ಈ ರೀತಿ ಹೀಗಳೆದರು.
ತಡೆರಹಿತ ರೈಲುಗಳನ್ನು ಪ್ರಕಟಿಸಿರುವುದನ್ನು ಅವರು ವಿವೇಚನಾರಹಿತವಾದ್ದು ಎಂದಿದ್ದು, ಎರ್ನಾಕುಲಂನಿಂದ ದೆಹಲಿವರೆಗೆ ತಡೆರಹಿತವಾಗಿ ಹೇಗೆ ರೈಲು ಓಡಿಸಲು ಸಾಧ್ಯ ಎಂದು ಎಂದು ಪ್ರಶ್ನಿಸಿದ್ದಾರೆ.
"ಈ ರೈಲು ನೀರಿಲ್ಲದೆ ಹೋಗಬಲ್ಲುದೇ? ಆಹಾರ ಪಡೆದುಕೊಳ್ಳಲೂ ಈ ರೈಲನ್ನು ನಿಲ್ಲಿಸುವುದಿಲ್ಲವೇ? ತಾಂತ್ರಿಕ ಅಗತ್ಯಗಳಿಗಾಗಿ ನಿಲ್ಲುವ ಅಗತ್ಯವಿರುವುದಿಲ್ಲವೇ?" ಎಂದು ಸುಷ್ಮಾ ಪ್ರಶ್ನೆಗಳ ಸುರಿಮಳೆಯನ್ನೇ ಎಸೆದರು.
ಅದೇ ಹೊತ್ತಿಗೆ ಮಹಿಳೆಯರಿಗಾಗಿ ವಿಶೇಷ ರೈಲುಗಳನ್ನು ಘೋಷಿಸಿರುವುದಕ್ಕೆ ಮತ್ತು 25 ರೂಪಾಯಿಗಳ ಮಾಸಿಕ ಪಾಸನ್ನು ಅಸಂಘಟಿತ ವಲಯದವರಿಗೆ ಪ್ರಕಟಿಸಿರುವುದಕ್ಕೆ ಹಾಗೂ 'ಯುವ' ರೈಲು ಯೋಜನೆಗಳಿಗಾಗಿ ಮಮತಾರನ್ನು ಪ್ರಶಂಸಿಸಿದ್ದಾರೆ.
ಈ ಬಜೆಟ್ ಸಾಮಾನ್ಯ ದೃಷ್ಟಿಕೋನವನ್ನೂ ಹೊಂದಿಲ್ಲ ಎಂದು ಮತ್ತೊಬ್ಬ ಬಿಜೆಪಿ ನಾಯಕ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಹೀಗಳೆದಿದ್ದಾರೆ.
ರೈಲ್ವೇ ಹಳಿಗಳನ್ನು ಅಭಿವೃದ್ಧಿಪಡಿಸುವ ಕೆಲಸಗಳನ್ನು ಕೈಗೆತ್ತಿಕೊಂಡಿಲ್ಲ. ಅಲ್ಲದೆ ಯಾವುದೇ ಪ್ರಮುಖ ಯೋಜನೆಗಳು ಕಾಣುತ್ತಿಲ್ಲ. ನಿಲ್ದಾಣಗಳನ್ನು ಆಧುನೀಕರಣಗೊಳಿಸುವುದರಲ್ಲಿ ಯಾವುದೇ ಹುರುಳಿಲ್ಲ. ಕಳೆದ ಆರು ವರ್ಷಗಳಿಂದ ಇಂತದ್ದನ್ನೆಲ್ಲ ನಾವು ಕೇಳುತ್ತಿದ್ದೇವೆ. ಆದರೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.
ಅತ್ತ ಎಡಪಕ್ಷಗಳು ಕೂಡ ಮಮತಾ ಬಜೆಟ್‌ಗೆ ಟೀಕಾಸ್ತ್ರಗಳನ್ನೆಸೆದಿವೆ. ತಾವಿಟ್ಟುಕೊಂಡಿದ್ದ ನಿರೀಕ್ಷೆಯನ್ನು ಬಜೆಟ್ ತಲುಪಿಯೇ ಇಲ್ಲ, ಇದೊಂದು ಕೇವಲ ಘೋಷಣೆಯ ಮುಂಗಡಪತ್ರ ಎಂದು ಬುದ್ಧದೇವ ಭಟ್ಟಾಚಾರ್ಯ ಟೀಕಿಸಿದ್ದಾರೆ. ಅಲ್ಲದೆ ಪ್ರಸಕ್ತ ಆರ್ಥಿಕ ದುಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳದೆ ಪ್ರಕಟಿಸಿಲಾಗಿರುವ ಬಜೆಟ್ ಎಂದೂ ಅವರು ತಿಳಿಸಿದ್ದಾರೆ.
|