ಅನಿಲ್ ಅಂಬಾನಿಯವರ ಆರ್‌ಎನ್‌ಆರ್‌ಎಲ್ ಕಂಪನಿಗೆ ಎಂಎಂಬಿಟಿಯು ಒಂದಕ್ಕೆ 2.34 ಅಮೆರಿಕನ್ ಡಾಲರ್‌ನಂತೆ ಅನಿಲ ಪೂರೈಕೆ ಮಾಡಲು ಬಾಂಬೆ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮುಖೇಶ್ ಅಂಬಾನಿಯವರ ಆರ್‌ಐಎಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ರಿಲಯೆನ್ಸ್ ನೈಸರ್ಗಿಕ ಅನಿಲ ಸಂಪನ್ಮೂಲ ಕಂಪನಿಯ ಅಂಗ ಸಂಸ್ಥೆಯ ಸ್ಥಾವರಕ್ಕೆ ಪೂರೈಸಬೇಕಾದ ಗ್ಯಾಸ್‌ನ ಪ್ರಮಾಣ, ಅವಧಿ ಮತ್ತು ದರದ ಕುರಿತು ಬಾಂಬೆ ಉಚ್ಛ ನ್ಯಾಯಾಲಯವು ನಿರ್ಧಾರ ತೆಗೆದುಕೊಳ್ಳುವಾಗ ತಪ್ಪು ಮಾಡಿದೆ ಎಂದು ರಿಲಯೆನ್ಸ್ ಇಂಡಸ್ಟ್ರೀಸ್ ಆರೋಪಿಸಿದೆ.
"ಬಹುತೇಕ ಶೇಕಡಾ 99.998ರಷ್ಟು ಶೇರುದಾರರು ಮತ್ತು ಸಾಲದಾರರು ಒಕ್ಕೊರಲಿನ ಒಪ್ಪಿಗೆ ನೀಡಿರುವಾಗ ಹಾಗೂ ನ್ಯಾಯಾಲಯದಿಂದಲೂ ಮಂಜೂರಾಗಿರುವಾಗ ಹೈಕೋರ್ಟ್ ಕಂಪನಿ ನ್ಯಾಯಾಲಯದ 1995ರ ಸೆಕ್ಷನ್ 392ರ ಕಂಪನಿ ನಿಯಮಾವಳಿಗಳಡಿಯಲ್ಲಿ ಕಂಪನಿಯ ವ್ಯವಸ್ಥೆಯನ್ನು ಪುನರ್ರಚಿಸಲು ಡಿಮರ್ಜರ್ ಯಾವುದೇ ಅಧಿಕಾರ ಹೊಂದಿಲ್ಲ" ಎಂದು ರಿಲಯೆನ್ಸ್ ಇಂಡಸ್ಟ್ರೀಸ್ ಲಿಮಿಟೆಟ್ ತನ್ನ ಮನವಿಯಲ್ಲಿ ತಿಳಿಸಿದೆ.
ರಿಲಯೆನ್ಸ್ ಇಂಡಸ್ಟ್ರೀಸ್ ಮಾಡಿಕೊಂಡಿದ್ದ 2005ರ ಕೌಟುಂಬಿಕ ಕರಾರಿನ ಪ್ರಕಾರ ಅದರ ಕೃಷ್ಣ - ಗೋದಾವರಿ ಜಲಾನಯನ ಪ್ರದೇಶದಿಂದ ರಿಲಯೆನ್ಸ್ ನ್ಯಾಚುರಲ್ ರಿಸೋರ್ಸಸ್ ಲಿಮಿಟೆಡ್ ಕಂಪನಿಗೆ ಮುಂದಿನ 17 ವರ್ಷಗಳವರೆಗೆ ಪ್ರತಿ 'ಎಂಎಂಬಿಟಿಯು'ಗೆ 2.34 ಅಮೆರಿಕನ್ ಡಾಲರ್‌ನಂತೆ ಪ್ರತಿದಿನ 28 ಮಿಲಿಯನ್ ಕ್ಯೂಬಿಕ್ ಮೀಟರ್ ಗ್ಯಾಸ್ ನೀಡಬೇಕೆಂದು ಜೂನ್ 15ರಂದು ಹೈಕೋರ್ಟ್ ಆದೇಶ ನೀಡಿತ್ತು.
ಇಲ್ಲಿ 'ಎಂಎಂಬಿಟಿಯು' ಎಂಬುದರ ಪೂರ್ಣ ಪಾಠ - ಮಿಲಿಯನ್ ಬ್ರಿಟೀಷ್ ಥರ್ಮಲ್ ಯುನಿಟ್ಸ್ ಎಂದಾಗಿದೆ.
|