ದೇಶದ ಸುಮಾರು ನಾಲ್ಕೂವರೆ ಕೋಟಿ ಉದ್ಯೋಗಿಗಳ ಭವಿಷ್ಯ ನಿಧಿಗೆ ಶೇಕಡಾ 8.5ರ ಬಡ್ಡಿ ದರವನ್ನು ಪ್ರಸಕ್ತ ಹಣಕಾಸು ವರ್ಷದಲ್ಲೂ ಮುಂದುವರಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ಶನಿವಾರ ನಿರ್ಧರಿಸಿದೆ.
ಕಳೆದ ಹಣಕಾಸು ವರ್ಷದಲ್ಲಿದ್ದಷ್ಟೇ ಬಡ್ಡಿ ದರವಾದ ಶೇಕಡಾ 8.5ನ್ನು ಈ ಬಾರಿ ಕೂಡ ನೀಡುವ ಸಲುವಾಗಿ ಕೇಂದ್ರ ಹಣಕಾಸು ಸಚಿವಾಲಯಕ್ಕೆ ನೌಕರರ ಭವಿಷ್ಯ ನಿಧಿ ಸಂಸ್ಥೆಯ ಟ್ರಸ್ಟಿಗಳ ಕೇಂದ್ರೀಯ ಮಂಡಳಿ (ಸಿಬಿಟಿ) ಶಿಫಾರಸ್ಸು ಮಾಡಿದೆ.
ಕೇಂದ್ರ ಕಾರ್ಮಿಕ ಖಾತೆ ಸಚಿವ ಎಂ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಇಪಿಎಫ್ ಸಂಸ್ಥೆಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಂಗವಾದ ಸಿಬಿಟಿ ಸಭೆಯಲ್ಲಿ, ಕಳೆದ ವರ್ಷದಲ್ಲಿದ್ದ ಬಡ್ಡಿ ದರವನ್ನೇ ಮುಂದುವರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಭವಿಷ್ಯ ನಿಧಿ ಇಡುಗಂಟಿಗೆ ಶೇಕಡಾ 8.5ರ ಬಡ್ಡಿ ದರ ನೀಡುವುದರಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ 6.4 ಕೋಟಿ ರೂಪಾಯಿಗಳ ಉಳಿತಾಯ ಕೈ ಬಿಟ್ಟು ಹೋಗಬಹುದು ಎಂದು ನಿರೀಕ್ಷಿಸಲಾಗಿದೆ.
ಒಂದು ವೇಳೆ ಇಪಿಎಫ್ ಬಡ್ಡಿ ದರವನ್ನು ಶೇಕಡಾ 8.75 ಅಥವಾ ಶೇಕಡಾ 9ರಷ್ಟು ಏರಿಸುವ ನಿರ್ಧಾರಕ್ಕೆ ಸಿಬಿಟಿ ಬರುತ್ತಿದ್ದಲ್ಲಿ ವಾರ್ಷಿಕವಾಗಿ ಸಂಸ್ಥೆಯು ಕ್ರಮವಾಗಿ 366.77 ಕೋಟಿ ಹಾಗೂ 739.94 ಕೋಟಿ ರೂಪಾಯಿಗಳ ನಷ್ಟ ಅನುಭವಿಸಬೇಕಾಗಿತ್ತು. ಕಳೆದ ವರ್ಷ ಸಂಸ್ಥೆಯು 8.5ರ ಬಡ್ಡಿದರವನ್ನು ಉಳಿಸಿಕೊಂಡಿದ್ದರ ಪರಿಣಾಮ 139 ಕೋಟಿ ರೂಪಾಯಿಗಳ ಕೊರತೆ ಎದುರಿಸಿತ್ತು.
ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳು ಬಡ್ಡಿ ದರವನ್ನು ಕಡಿತಗೊಳಿಸಿದರೂ ನೌಕರರ ಭವಿಷ್ಯ ನಿಧಿ ಸಂಸ್ಥೆಯು ಶೇಕಡಾ 8.5ರ ಬಡ್ಡಿ ದರವನ್ನು ಮುಂದುವರಿಸುವ ನಿರ್ಧಾರಕ್ಕೆ ಬಂದಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಮೇ ತಿಂಗಳಲ್ಲಿ ಠೇವಣಿ ದರವನ್ನು 50 ಮೂಲ ಅಂಶಗಳಿಂದ 25ಕ್ಕಿಳಿಸಿತ್ತು. ಇದನ್ನೇ ಇತರ ಬ್ಯಾಂಕುಗಳು ಕೂಡ ಅನುಸರಿಸಿದ್ದವು.
|