ಏರ್ ಇಂಡಿಯಾ ನೌಕರರ ಮುಷ್ಕರವನ್ನು 'ದುರದೃಷ್ಟಕರ' ಎಂದಿರುವ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್, ಇದರಿಂದಾಗಿ ಪ್ರಯಾಣಿಕರಿಗೆ ಋಣಾತ್ಮಕ ಸಂದೇಶ ರವಾನೆಯಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಆರ್ಥಿಕ ಸಂಕಷ್ಟದಲ್ಲಿರುವ ಹೊತ್ತಿನಲ್ಲಿ ಅದರ ಉದ್ಯೋಗಿಗಳು ಪ್ರತಿ ದಿನ ಎರಡು ಗಂಟೆಗಳ ಮುಷ್ಕರ ನಡೆಸುವ ನಿರ್ಧಾರಕ್ಕೆ ಬಂದಿರುವುದು ದುರದೃಷ್ಟಕರ. ಇಂತಹ ಪ್ರತಿರೋಧಗಳು ಪ್ರಯಾಣಿಸುವ ಸಾರ್ವಜನಿಕರ ಮೇಲೆ ಪ್ರಭಾವ ಬೀರಲಿದ್ದು, ಏರ್ ಇಂಡಿಯಾದಿಂದ ಅವರು ದೂರ ಉಳಿಯುವ ಸಾಧ್ಯತೆಯಿದೆ ಎಂದು ಸಚಿವರು ನೌಕರರ ನಿರ್ಧಾರವನ್ನು ಸರಿಯಲ್ಲ ಎಂದಿದ್ದಾರೆ.
ಏರ್ ಇಂಡಿಯಾ ಉದ್ಯೋಗಿಗಳು ಪ್ರಸಕ್ತ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಮತ್ತು ಬೆಂಬಲಕ್ಕೆ ನಿಲ್ಲಬೇಕು. ಅವರ ಮುಂದಿನ ಧನಾತ್ಮಕ ನಡೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಸಚಿವರು ತಿಳಿಸಿದರು.
ಏರ್ ಇಂಡಿಯಾ ಪರಿಸ್ಥಿತಿಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ತಿಂಗಳೊಳಗೆ ಪರಿಷ್ಕೃತ ಯೋಜನೆಯೊಂದಿಗೆ ಸರಕಾರದೆದುರು ಬರುವಂತೆ ಸೂಚಿಸಿದ್ದಾರೆ. ಭಾರೀ ನಷ್ಟದಲ್ಲಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ತನ್ನ ಅನಗತ್ಯ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬೇಕೆಂದೂ ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಈ ಹಿಂದೆ ಮಾತು ಕೊಟ್ಟಂತೆ ಏರ್ ಇಂಡಿಯಾ ವೇತನ ನೀಡದ ಹಿನ್ನಲೆಯಲ್ಲಿ ಅದರ ಸಿಬಂದಿಗಳು ಪ್ರತಿ ದಿನ ಎರಡು ಗಂಟೆ ಮುಷ್ಕರವನ್ನು ದೇಶಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ನಡೆಸುತ್ತಿದ್ದಾರೆ.
ಈ ರೀತಿ ಮುಷ್ಕರ ನಡೆಸದಂತೆ ಏರ್ ಇಂಡಿಯಾ ಕೇಳಿಕೊಂಡಿತ್ತು. ಅಲ್ಲದೆ ಮುಷ್ಕರನಿರತರ ವೇತನವನ್ನು ನೀಡುವುದಿಲ್ಲ ಎಂಬ ಬೆದರಿಕೆಯನ್ನೂ ಹಾಕಿತ್ತು. ಇದ್ಯಾವುದನ್ನೂ ಕಿವಿಗೆ ಹಾಕಿಕೊಳ್ಳದ ನೌಕರರು ಮುಷ್ಕರ ಮುಂದುವರಿಸಿದ್ದಾರೆ.
|