ಮಾನ್ಸೂನ್ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ರಾಜ್ಯದ ಮೂಲಗಳಿಂದ 900,000 ಟನ್ ಗೋಧಿ ಹಾಗೂ ಖಾಸಗಿ ವಲಯದಿಂದ 650,000 ಟನ್ ಗೋಧಿ ಉತ್ಪನ್ನಗಳನ್ನು ರಫ್ತು ಮಾಡಲು ಕೇಂದ್ರ ಸರಕಾರವು ಅನುಮತಿ ನೀಡಿದೆ.
ಅದೇ ಹೊತ್ತಿಗೆ ಸರಕಾರವು ರಫ್ತಿನಲ್ಲಿ ಸಬ್ಸಿಡಿ ನೀಡಬೇಕೆಂಬ ಬೇಡಿಕೆಯನ್ನು ತಳ್ಳಿ ಹಾಕಿದೆ. ಹಾಗಾಗಿ ರಫ್ತು ಪಕ್ಕದ ಬಾಂಗ್ಲಾದೇಶಕ್ಕೆ ಮಾತ್ರ ಸಾಧ್ಯವಾಗಲಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ಸಚಿವಾಲಯದ ಅಂಗವಾಗಿರುವ ವಿದೇಶ ವ್ಯವಹಾರಗಳ ಮಹಾನಿರ್ದೇಶಕರು ಶುಕ್ರವಾರ ಮಾತನಾಡುತ್ತಾ, ಮುಂದಿನ ವರ್ಷದ ಮಾರ್ಚ್‌ವರೆಗೆ ಎಂಎಂಟಿಸಿ ಲಿಮಿಟೆಡ್, ಎಸ್‌ಟಿಸಿ ಲಿಮಿಟೆಡ್ ಮತ್ತು ಪಿಇಸಿ ಲಿಮಿಟೆಡ್ ಮೂಲಕ ಧಾನ್ಯಗಳನ್ನು ರಫ್ತು ಮಾಡಲು ಅವಕಾಶ ನೀಡಲಾಗಿದೆ ಎಂದು ಪ್ರಕಟಿಸಿದರು.
ಆಗ್ನೇಯ ಏಷಿಯಾ ಮತ್ತು ಮಧ್ಯ ಪ್ರಾಚ್ಯಗಳಲ್ಲಿ ಭಾರತದ ಗೋಧಿ ಬೆಲೆಯು ಪ್ರತಿ ಟನ್ನಿಗೆ 240 ಡಾಲರ್ ಅಥವಾ ಅದಕ್ಕಿಂತ ಹೆಚ್ಚಾಗಿರಬಹುದು ಅಥವಾ ಕಪ್ಪು ಸಮುದ್ರ ಮತ್ತು ಅಮೆರಿಕಾದ ಗೋಧಿಗಿಂತ 20ರಿಂದ 30 ಡಾಲರ್ ದುಬಾರಿಯಾಗಬಹುದು ಎಂದು ಅಂತಾರಾಷ್ಟ್ರೀಯ ಮಾರುಕಟ್ಟೆಯ ಒಬ್ಬ ಉದ್ಯಮಿ ಅಭಿಪ್ರಾಯಪಟ್ಟಿದ್ದಾರೆ.
"ಸಬ್ಸಿಡಿಯಿಲ್ಲದ ಕಾರಣ ರಫ್ತುದಾರರಿಗೆ ಇದು ಲಾಭ ತರದು. ಕೇವಲ ಬಾಂಗ್ಲಾದೇಶ ಅಥವಾ ಆ ವ್ಯಾಪ್ತಿಯೊಳಗೆ ಮಾತ್ರ ರಫ್ತು ಸಾಧ್ಯವಾಗಬಹುದು" ಎಂದು ಅಂತಾರಾಷ್ಟ್ರೀಯ ಕಂಪನಿಯ ಜತೆ ಕಾರ್ಯನಿರ್ವಹಿಸುತ್ತಿರುವ ಮುಂಬೈ ಮೂಲದ ಉದ್ಯಮಿಯೊಬ್ಬರು ತಿಳಿಸಿದ್ದಾರೆ.
ಭಾರತೀಯ ರೋಲರ್ ಫ್ಲೋರ್ ಮಿಲ್ಲರ್ಸ್ ಫೆಡರೇಷನ್ ಪ್ರತಿಕ್ರಿಯೆ ನೀಡುತ್ತಾ, ಗೋಧಿ ಉತ್ಪನ್ನಗಳ ರಫ್ತು ಸಾಧ್ಯವಿದೆ. ಆದರೆ ಸರಕಾರವು ರಫ್ತು ವ್ಯವಹಾರಗಳನ್ನು ಹೇಗೆ ನಿರ್ವಹಿಸುತ್ತದೆ ಎಂಬುದರ ಮಾಹಿತಿಗಳನ್ನು ನೀಡಬೇಕು ಎಂದಿದೆ.
|