ಸ್ಟೇಟ್ ಬ್ಯಾಂಕ್ ಆಫ್ ಇಂದೋರ್‌ನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಜತೆ ವಿಲೀನಗೊಳಿಸುವ ಪ್ರಸ್ತಾಪವನ್ನು ವಿರೋಧಿಸಿ ಬ್ಯಾಂಕ್ ಯೂನಿಯನ್‌ಗಳು ಕರೆ ನೀಡಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ.
ಈ ಸಂಬಂಧ ಆಡಳಿತ ಮತ್ತು ಯೂನಿಯನ್‌ಗಳ ಜತೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಮುಖ್ಯ ಉಪ ಕಾರ್ಮಿಕ ಆಯುಕ್ತರು ನೀಡಿದ ಹಿನ್ನಲೆಯಲ್ಲಿ ಜುಲೈ 6ರಂದು ದೇಶಾದ್ಯಂತ ನಡೆಯಲಿದ್ದ ಪ್ರತಿಭಟನೆಯನ್ನು ಮುಂದಕ್ಕೆ ಹಾಕಲಾಗಿದೆ.
ಮುಖ್ಯ ಉಪ ಕಾರ್ಮಿಕ ಆಯುಕ್ತರ ಜತೆ ನಿನ್ನೆ ಯೂನಿಯನ್‌ಗಳು ಮಾತುಕತೆ ನಡೆಸಿದ ನಂತರ ಪ್ರತಿಭಟನೆ ಮುಂದೂಡುವ ನಿರ್ಧಾರಕ್ಕೆ ಬರಲಾಯಿತು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್. ವೆಂಕಟಾಚಲಂ ತಿಳಿಸಿದ್ದಾರೆ.
"ನಮ್ಮ ಯಾವುದೇ ಬ್ಯಾಂಕುಗಳನ್ನು ಮುಚ್ಚುವುದು ಅಥವಾ ಭಾರತೀಯ ಸ್ಟೇಟ್ ಬ್ಯಾಂಕ್ ಜತೆ ವಿಲೀನಗೊಳಿಸುವುದನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ" ಎಂದು ಇದೇ ಸಂದರ್ಭದಲ್ಲಿ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
ಎರಡೂ ಕಡೆಯ ಸಮಸ್ಯೆಗಳನ್ನು ಆಲಿಸಿದ ನಂತರ ಆಯುಕ್ತರು ವಿಲೀನ ಪ್ರಕ್ರಿಯೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಪರಸ್ಪರ ಮಾತುಕತೆಯೇ ಪರಿಹಾರ ಎಂದು ತಿಳಿಸಿದ್ದಾರೆ ಎಂದು ವೆಂಕಟಾಚಲಂ ವಿವರಿಸಿದ್ದಾರೆ.
ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಧೋರ್ ಆಡಳಿತ ಮಂಡಳಿಗಳು ಯೂನಿಯನ್‌ಗಳನ್ನು ಮಾತುಕತೆಗೆ ಆಹ್ವಾನಿಸಿವೆ.
ವಿಲೀನವನ್ನು ವಿರೋಧಿಸಿ ಎನ್‌ಸಿಬಿಇ, ಎಐಬಿಓಎ, ಬಿಇಎಫ್‌ಐ ಮತ್ತು ಐಎನ್‌ಬಿಓಸಿಗಳು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದವು. ಆಡಳಿತ ಮಂಡಳಿ ಪರವಾಗಿ ಭಾರತೀಯ ಬ್ಯಾಂಕುಗಳ ಸಂಘಟನೆ, ಭಾರತೀಯ ಸ್ಟೇಟ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂದೋರ್ ಮತ್ತು ಇತರ ಕೆಲವು ಸಂಸ್ಥೆಗಳು ಪಾಲ್ಗೊಂಡಿದ್ದವು.
|