ಆರ್ಥಿಕ ಸಂಕಷ್ಟದಲ್ಲಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ತನ್ನ ಉದ್ಯೋಗಿಗಳನ್ನು ವಜಾ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್, ಆರ್ಥಿಕ ಮತ್ತು ಸಂಘಟನಾತ್ಮಕ ಪುನರ್ರಚನೆ ಮಾಡುವ ಪ್ರಸ್ತಾಪವಿರುವುದನ್ನು ತಿಳಿಸಿದ್ದಾರೆ." ಯಾವುದೇ ಕಾರಣಕ್ಕೂ ವಜಾ ಮಾಡುವ ಪ್ರಶ್ನೆಯಿಲ್ಲ. ನೌಕರರನ್ನು ರಕ್ಷಿಸಲಾಗುತ್ತದೆ" ಎಂದಿರುವ ಪಟೇಲ್, ಆಡಳಿತ ಮತ್ತು ನೌಕರರಿಗೆ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸೂಕ್ತ ಸಮಯ ಎಂದು ತಿಳಿಸಿದರು. " ಇದೀಗ ಕಠಿಣ ಕಾಲವನ್ನು ಎದುರಿಸುತ್ತಿರುವ ಕಾರಣ ನಾವೆಲ್ಲ ಬೆಂಬಲ ನೀಡಬೇಕಾದ ಅಗತ್ಯವಿದೆ. ಸಂಸ್ಥೆಯನ್ನು ಆರೋಗ್ಯಕರ ಹಳಿಗೆ ಮರಳಿಸಲು ಆರ್ಥಿಕ ಮತ್ತು ಸಂಘಟನಾತ್ಮಕ ಪುನರ್ ರಚನೆಯ ಹಾದಿಯನ್ನು ನಾವು ಹಿಡಿಯಲಿದ್ದೇವೆ" ಎಂದು ಪಟೇಲ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಟ್‌ನ 'ಲವಣಮುಕ್ತ ಸ್ಥಾವರ' ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ 'ಮನಾಲಿ-ಚೆನ್ನೈ ವೈಮಾನಿಕ ಇಂಧನ ಪೈಪ್‌ಲೈನ್' ಉದ್ಘಾಟನೆ ಮಾಡಿದ ನಂತರ ಚೆನ್ನೈ ವಿಮಾನನಿಲ್ದಾಣ ಹಾದಿಯಲ್ಲಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ.ವೇತನ ಪರಿಷ್ಕರಣೆ ನಿರ್ಧಾರದ ಬಗ್ಗೆ ವಿವರ ನೀಡಲಿಚ್ಛಿಸದ ಪಟೇಲ್, "ನಾವು ಚರ್ಚೆ ಮಾಡಿ ಈ ಸಂಬಂಧ ಎಲ್ಲರಿಗೂ ಒಪ್ಪಿಗೆಯಾಗುವ ರೀತಿಯ ಮಾದರಿ ವೇತನ ನಿರ್ಧಾರಕ್ಕೆ ಬಂದಿದ್ದೇವೆ" ಎಂದರು.ಜೂನ್ ತಿಂಗಳ ವೇತನ ವಿಳಂಬ ಖಂಡಿಸಿ ಶುಕ್ರವಾರ ಎರಡು ಗಂಟೆಗಳ ಮುಷ್ಕರ ನಡೆಸಿದ್ದ ಏರ್ ಇಂಡಿಯಾ ಸಿಬಂದಿಗಳ ಕ್ರಮವನ್ನು ಆಡಳಿತ ಮಂಡಳಿಯು ಅಕ್ರಮ ಎಂದಿರುವುದರ ಕುರಿತು ಪಟೇಲ್, ಮುಷ್ಕರ ಕೇವಲ ಸಾಂಕೇತಿಕವಾಗಿತ್ತು ಮತ್ತು ವೈಮಾನಿಕ ಕಾರ್ಯಗಳಲ್ಲಿ ಯಾವುದೇ ವ್ಯತ್ಯಯವುಂಟಾಗಿರಲಿಲ್ಲ ಎಂದು ವಿವರಿಸಿದ್ದಾರೆ. |