ಕಳೆದ ವರ್ಷದ ಆರ್ಥಿಕ ಹಿಂಜರಿತವನ್ನು ಸಂಪೂರ್ಣ ಅನುಭವಿಸಿದ ನಂತರ ಇದೀಗ ಉದ್ಯೋಗದ ನಿರೀಕ್ಷೆಗಳು ಹೆಚ್ಚುತ್ತಿದ್ದು, ಸಮೀಕ್ಷೆಯೊಂದರ ಪ್ರಕಾರ ಮುಂದಿನ 12 ತಿಂಗಳುಗಳಲ್ಲಿ ದೇಶವು ಈ ನಿಟ್ಟಿನಲ್ಲಿ ಸುಧಾರಣೆ ಕಾಣಲಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 70 ನೇಮಕಾತಿ ಏಜೆಂಟ್‌ಗಳು, ಮುಂದಿನ ಮೂರು ತಿಂಗಳುಗಳ ಅವಧಿಯಲ್ಲಿ ಔದ್ಯೋಗಿಕ ಸಮಸ್ಯೆಗಳು ಪರಿಹಾರ ಕಾಣಲಿವೆ ಎಂದಿದ್ದಾರೆ.
ದೇಶದಾದ್ಯಂತದ ನೇಮಕಾತಿ ಏಜೆಂಟರನ್ನು ಸಂಪರ್ಕಿಸಿದ್ದ 'ಎಡೆಲ್‌ವೈಸ್ ಸೆಕ್ಯುರಿಟೀಸ್' ಸಂಸ್ಥೆಯು ಈ ಸಮೀಕ್ಷೆಯನ್ನು ನಡೆಸಿದೆ. ಅವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ (ಶೇಕಡಾ 53) ಮುಂದಿನ ಒಂದು ವರ್ಷದಲ್ಲಿ ಪರಿಸ್ಥಿತಿ ಸುಧಾರಿಸುವ ಭರವಸೆ ಹೊಂದಿದ್ದಾರೆ.
ಅದಲ್ಲದೆ ಶೀಘ್ರದಲ್ಲೇ ಅಥವಾ ಮೂರು ತಿಂಗಳುಗಳೊಳಗೆ ಪ್ರಸಕ್ತ ನೆಲೆಸಿರುವ ಔದ್ಯೋಗಿಕ ಅಸ್ಥಿರತೆಯು ಮಾಯವಾಗಲಿದೆ ಎಂದೂ ಈ ಸರ್ವೇ ಬಹಿರಂಗಪಡಿಸಿದೆ.
"ಸುಮಾರು ಶೇಕಡಾ 71ರಷ್ಟು ಮಂದಿ ಮುಂದಿನ ಮೂರು ತಿಂಗಳುಗಳ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆ ಸ್ಥಿರವಾಗಲಿರುವ ನಿರೀಕ್ಷೆ ಹೊಂದಿದ್ದಾರೆ" ಎಂದು ಸಮೀಕ್ಷೆ ತನ್ನ ವರದಿಯಲ್ಲಿ ತಿಳಿಸಿದೆ.
ಕಳೆದೊಂದು ವರ್ಷದ ಅವಧಿಯಲ್ಲಿ ನಿರುದ್ಯೋಗಿಗಳ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳ ಕಂಡಿದೆ ಎನ್ನುವುದು ಶೇಕಡಾ 69 ಏಜೆಂಟರ ಅಭಿಪ್ರಾಯ.
ಈ ಸರ್ವೆಯನ್ನು ಐಟಿ ಹೊರತುಪಡಿಸಿ ಉಳಿದೆಲ್ಲಾ ವಲಯಗಳಲ್ಲೂ ನಡೆಸಿ ಅಭಿಪ್ರಾಯಗಳನ್ನು ಪಡೆಯಲಾಗಿದ್ದು, ಮುಂದಿನ ದಿನಗಳಲ್ಲಿ ಉದ್ಯೋಗ ಸಮಸ್ಯೆಗಳು ಪರಿಹಾರವಾಗುವ ನಿರೀಕ್ಷೆ ಕಂಡು ಬಂದಿದೆ. ಅಲ್ಲದೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೂ ಬೆಂಬಲ ವ್ಯಕ್ತವಾಗುವ ನಂಬಿಕೆ ವ್ಯಕ್ತವಾಗಿದೆ.
ಮುಂಬೈಯಲ್ಲಿನ ಶೇಕಡಾ 55 ಏಜೆಂಟರು, ಮುಂದಿನ ಒಂದು ವರ್ಷದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ.
|