ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕೇಂದ್ರ ಬಜೆಟ್; ನಿರೀಕ್ಷೆಗಳು ನಿಜವಾಗಬಹುದೇ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇಂದ್ರ ಬಜೆಟ್; ನಿರೀಕ್ಷೆಗಳು ನಿಜವಾಗಬಹುದೇ?
ಜಾಗತಿಕ ಆರ್ಥಿಕ ಮಂದಗತಿ ಹಿನ್ನಲೆಯಲ್ಲಿ ಸಹಕಾರ ನೀಡುವಂತೆ ಅಂಗಲಾಚಿರುವ ಉದ್ಯಮ ರಂಗ, ಗ್ರಾಹಕರ ವಲಯಗಳು, ಕೃಷಿ ವಲಯಗಳು ಸೇರಿದಂತೆ ದೇಶದ ಬಹುತೇಕ ಕ್ಷೇತ್ರಗಳಿಗೆ ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರ ಬಜೆಟ್ ಹೇಗೆ ಸ್ಪಂದಿಸಲಿದೆ ಎಂಬುದು ಸೋಮವಾರ ಮಧ್ಯಾಹ್ನ ಬಹಿರಂಗವಾಗಲಿದೆ.

ಕಳೆದ ವರ್ಷ ಕೃಷಿ ಸಾಲ ಮನ್ನಾ, ವೇತನ ವರ್ಗಕ್ಕೆ ಆದಾಯ ತೆರಿಗೆ ರಿಯಾಯಿತಿ, ಶಿಕ್ಷಣ ಮತ್ತು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಹೆಚ್ಚಿನ ಅನುದಾನ ಮುಂತಾದ ಅನುಕೂಲಗಳನ್ನು ಪ್ರಕಟಿಸಿದ್ದ ಪಿ. ಚಿದಂಬರಂ ಬಜೆಟನ್ನು 'ಜನಪ್ರಿಯ' ಎಂದೇ ಕರೆಯಲಾಗಿತ್ತು.

ಪಾತಾಳ ತಲುಪಿರುವ ಹಣದುಬ್ಬರವನ್ನು ಮುಂಚಿನ ಸ್ಥಾನಕ್ಕೆ ತಂದು ನಿಲ್ಲಿಸುವುದು, ರಫ್ತು ಪ್ರಮಾಣದಲ್ಲಿನ ಹೆಚ್ಚಳಕ್ಕೆ ಪೂರಕ ಕ್ರಮಗಳು ಸೇರಿದಂತೆ ಹಲವು ಸಮಸ್ಯೆಗಳ ಕಡೆ ಓಗೊಡಬೇಕಾಗಿರುವ ಕಾರಣದಿಂದ 2009-10ರ ಮುಂಗಡ ಪತ್ರವು ಬಹುತೇಕ 'ಬ್ಯಾಲೆನ್ಸ್' ಆಗಿರಬಹುದು ಎಂದುಕೆಲವು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷಕ್ಕಿಂತ ಈ ಸಲ ಇರುವ ನಿರೀಕ್ಷೆಗಳು ಭಿನ್ನವಾಗಿವೆ. ಕಾರ್ಪೊರೇಟ್ ಸಂಸ್ಥೆಗಳ ತೆರಿಗೆ ಮತ್ತು ವೈಯಕ್ತಿಕ ತೆರಿಗೆಯಲ್ಲಿ ಭಾರೀ ವಿನಾಯಿತಿ, ಉಪತೆರಿಗೆ (ಸೆಸ್), ಸರ್ಚಾರ್ಜ್ ಮತ್ತು ವಹಿವಾಟು ತೆರಿಗೆಗಳನ್ನು ವಾಪಸು ಪಡೆಯಬೇಕು ಎಂಬ ಬೇಡಿಕೆಗಳಿಗೆ ಮುಖರ್ಜಿ ಸ್ಪಂದಿಸುವ ಸಾಧ್ಯತೆಗಳು ನಿಚ್ಛಳವಾಗಿವೆ.

ಜಾಗತಿಕ ಆರ್ಥಿಕ ಹಿನ್ನಡೆಯಿಂದ ತೊಂದರೆಗೊಳಗಾಗಿರುವ ಐಟಿ/ಬಿಟಿ ಉದ್ಯೋಗಿಗಳ ನೆರವಿಗೆ ಬರುವುದು, ಅಟೋಮೊಬೈಲ್ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ, ಟೆಕ್ಸ್‌ಟೈಲ್‌ಗೆ ಆಸರೆ, ಉಚಿತ ಆಹಾರ ಮತ್ತು ಮನರಂಜನಾ ಕೂಪನ್‌ಗಳನ್ನು ಒದಗಿಸುವುದು, ಸಂದರ್ಶನಗಳಿಗೆ ಹಾಜರಾಗುವ ಉದ್ಯೋಗಾರ್ಥಿಗಳಿಗೆ ವಿಮಾನಗಳಲ್ಲಿ 'ಗರೀಬ್' ಯೋಜನೆ ಮೂಲಕ ಸೀಟು ಮೀಸಲಾತಿಗೆ ಅವಕಾಶ, ಇಂಧನ ಬೆಲೆ ನಿಯಂತ್ರಣಕ್ಕೆ ಕ್ರಮ ಮುಂತಾದ ನಿರೀಕ್ಷೆಗಳೂ ಈ ಬಾರಿ ಪ್ರಮುಖ ಸ್ಥಾನವನ್ನು ಪಡೆದುಕೊಂಡಿವೆ.

ಕಾರ್ಪೊರೇಟ್ ಸಂಸ್ಥೆಗಳಿಗೆ ವಿಧಿಸಲಾಗುವ ತೆರಿಗೆಯನ್ನು ಶೇಕಡಾ 30ರಿಂದ 25ಕ್ಕಿಳಿಸುವುದು ಮತ್ತು ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 1.5 ಲಕ್ಷದಿಂದ 2.5 ಲಕ್ಷ ರೂಪಾಯಿಗಳಿಗೇರಿಸುವುದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಿಯಂತ್ರಣ ಬಿಟ್ಟು ಕೊಡುವುದು, ರೈಲ್ವೇ, ಕಲ್ಲಿದ್ದಲು ಮತ್ತು ಪರಮಾಣು ಶಕ್ತಿಯ ಮೇಲಿನ ಸರಕಾರದ ಏಕಸ್ವಾಮ್ಯವನ್ನು ಕೊನೆಗೊಳಿಸುವ ವಿಚಾರವನ್ನೂ ಮುಖರ್ಜಿಯವರು ತನ್ನ ಆರ್ಥಿಕ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

ಎಲ್ಲಾ ಸಾರ್ವಜನಿಕ ಸ್ವಾಮ್ಯ ಸಂಸ್ಥೆಗಳನ್ನು (ಪಿಎಸ್‌ಯು) ಪಟ್ಟಿ ಮಾಡಿ ಪುನಶ್ಚೇತನ ಮಾಡಲು ಅಸಾಧ್ಯವಾಗಿರುವುದನ್ನು ಹರಾಜು

ಹಾಕುವುದು, ಲಾಭದಾಯಕವೆಂದು ಗುರುತಿಸಲಾದ 'ನವರತ್ನ'ವಲ್ಲದ ಪಿಎಸ್‌ಯುದಲ್ಲಿನ ಶೇಕಡಾ 5ರಿಂದ 10 ಶೇರುಗಳನ್ನು ಮಾರುವ ಕಾರ್ಯವನ್ನು ಸಂಪೂರ್ಣಗೊಳಿಸುವುದು, ಕೆಲವು 'ನವರತ್ನ' ಸಂಸ್ಥೆಗಳನ್ನು 'ಮಹಾನವರತ್ನ' ಎಂದು ಘೋಷಿಸುವ ಸಂಭವನೀಯತೆ ಮುಖರ್ಜಿಯವರ ಮಾತಿನಲ್ಲಿ ವ್ಯಕ್ತವಾಗಿದೆ.

3ಜಿ ಸ್ಪೆಕ್ಟ್ರಮ್ ಹರಾಜು, ಸರಕು ಮತ್ತು ಸೇವಾ ತೆರಿಗೆಯನ್ನು ಏಪ್ರಿಲ್ 1, 2010ರಿಂದ ಜಾರಿಗೆ ತರುವುದು, ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರಕ್ಕೆ ಚುರುಕು ಮುಟ್ಟಿಸುವುದು ಮುಂತಾದ ಕುರಿತೂ ಸ್ಪಷ್ಟ ನಿರ್ಧಾರಗಳನ್ನು ಇಂದಿನ ಬಜೆಟ್‌ನಲ್ಲಿ ಪ್ರಕಟವಾಗಬಹುದು.

ಗೃಹಬಳಕೆಯ ಎಲ್‌ಪಿಜಿಯ ಮೇಲಿನ ಸಬ್ಸಿಡಿ ದರವನ್ನು ವರ್ಷದಲ್ಲಿ ಗರಿಷ್ಠ ಆರರಿಂದ ಎಂಟು ಸಿಲಿಂಡರ್‌ಗಳಿಗೆ ಸೀಮಿತಗೊಳಿಸುವುದು, ಗ್ರಾಮಾಂತರ ಪ್ರದೇಶದಲ್ಲಿ ಸೀಮೆಎಣ್ಣೆ ಮತ್ತು ಅದರ ಮೇಲಿನ ಸಬ್ಸಿಡಿಯನ್ನು ಕ್ರಮೇಣ ಕಡಿಮೆ ಮಾಡುತ್ತಾ ಬರುವುದು, ಕೃಷಿಕರಿಗೆ ಪೂರಕ ಸವಲತ್ತುಗಳನ್ನು ಪ್ರಕಟಿಸುವುದು, ಸಹಕಾರಿ ಬ್ಯಾಂಕುಗಳ ಬೇಡಿಕೆ ಪೂರೈಸುವುದು ಮುಂತಾದ ಹತ್ತು ಹಲವು ನಿರೀಕ್ಷೆಗಳು ಕೇಂದ್ರ ಬಜೆಟ್‌ನಲ್ಲಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮುಂದಿನ ಒಂದು ವರ್ಷದಲ್ಲಿ ಉದ್ಯೋಗ ಹೆಚ್ಚಳ: ಸಮೀಕ್ಷೆ
ಏರ್ ಇಂಡಿಯಾ ಸಿಬಂದಿ ವಜಾ ಮಾಡಲ್ಲ: ಪಟೇಲ್
ಜಿಎಸ್‌ಟಿಗೆ ವಸತಿ ಕ್ಷೇತ್ರ
ಆರ್ಎನ್‌ಆರ್‌ಎಲ್ ಕೂಡ ಸುಪ್ರೀಂಗೆ
ಚಿನ್ನ ದರ ಮತ್ತಷ್ಟು ಕುಸಿತ; ಬೆಳ್ಳಿ ಚೇತರಿಕೆ
ಎಸ್‌ಬಿಐ ವಿಲೀನ; ಜುಲೈ 6ರ ಪ್ರತಿಭಟನೆ ಮುಂದಕ್ಕೆ