ಪ್ರಣಬ್ ಮುಖರ್ಜಿಯವರು ಗ್ರಾಮಾಂತರ ಪ್ರದೇಶ, ಬಡವರು ಹಾಗೂ ಕೃಷಿ ಕ್ಷೇತ್ರಕ್ಕೆ ಭರಪೂರ ಯೋಜನೆಗಳನ್ನು 2009-10ರ ಸಾಲಿನ ಆಯವ್ಯಯ ಪತ್ರದಲ್ಲಿ ಪ್ರಕಟಿಸಿದ್ದಾರೆ.
ಪ್ರಮುಖವಾಗಿ ಕಳೆದ ವರ್ಷ ಚಿದಂಬರಂ ಮಂಡಿಸಿದ್ದ ಬಜೆಟ್‌ನಲ್ಲಿ 60,000 ಕೋಟಿ ರೂಪಾಯಿ ರೈತರ ಸಾಲ ಮನ್ನಾ ಮಾಡಲಾಗಿದ್ದ ಯೋಜನೆಯ ಅವಧಿಯನ್ನು ಆರು ತಿಂಗಳಿಗೆ ವಿಸ್ತರಿಸಿದ್ದು. ಅದೂ ಅಲ್ಲದೆ ಶೇ.7 ಬಡ್ಡಿ ದರದಲ್ಲಿ ಕೃಷಿಕರಿಗೆ ಸಾಲ, ಕೃಷಿಗೆ 3.25 ಲಕ್ಷ ಕೋಟಿ ರೂಪಾಯಿ ಅನುದಾನದ ಮೂಲಕ ಮುಖರ್ಜಿಯವರು ಕೂಡ ರೈತರ ಕೈ ಹಿಡಿದಿದ್ದಾರೆ.
ರಾಷ್ಟ್ರದ ಜೀವನಾಡಿ ಎನ್ನಲಾಗುವ ಕೃಷಿ ಕ್ಷೇತ್ರದಲ್ಲಿ ಶೇಕಡಾ 4ರಷ್ಟು ಸುಧಾರಣೆ ಗುರಿಯನ್ನು ಪ್ರಕಟಿಸಿರುವ ಸರಕಾರವು ನೀರಾವರಿ ಯೋಜನೆಗಳಿಗೆ ಸಾವಿರ ಕೋಟಿ ರೂಪಾಯಿಗಳ ಹೆಚ್ಚಿನ ಅನುದಾನ ನೀಡುವುದಾಗಿ ಹೇಳಿದೆ. ರಸಗೊಬ್ಬರ ಸಬ್ಸಿಡಿಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಸಹಾಯಧನ ರೈತರಿಗೆ ನೇರವಾಗಿ ಸಿಗುವಂತೆ ಮಾಡುವುದು ಕೂಡ ಸರಕಾರದ ಮತ್ತೊಂದು ಪ್ರಮುಖ ನಿರ್ಧಾರ.
ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿರುವ ಬಜೆಟ್‌ನಲ್ಲಿ ಗೃಹ ನಿರ್ಮಾಣ ವಲಯಕ್ಕೆ ನಿಧಿ ಹೆಚ್ಚಳ ಮಾಡಲಾಗಿದೆ. ಒಂದು ಲಕ್ಷದವರೆಗಿನ ಗೃಹಸಾಲ ಬಡ್ಡಿ ದರಕ್ಕೆ ಸಬ್ಸಿಡಿ, ನಗರ ಪ್ರದೇಶದ ಬಡವರಿಗೆ ಗೃಹ ನಿರ್ಮಾಣಕ್ಕಾಗಿ 3973 ಕೋಟಿ ರೂಪಾಯಿ, ಗ್ರಾಮೀಣ ವಸತಿ ಯೋಜನೆಗೆ ಎರಡು ಸಾವಿರ ಕೋಟಿ ರೂಪಾಯಿ, ಇಂದಿರಾ ಆವಾಸ್ ಯೋಜನೆಯಲ್ಲಿ ಶೇಕಡಾ 63ರಷ್ಟು (8,800 ಕೋಟಿ ರೂಪಾಯಿ) ಹಾಗೂ ರಾಜೀವ್ ಗಾಂಧಿ ವಸತಿ ಯೋಜನೆ ಅನುದಾನದಲ್ಲೂ ಹೆಚ್ಚಳ ಮಾಡುವ ಮೂಲಕ ವಸತಿ ಯೋಜನೆಗಳಿಗೆ ಸರಕಾರ ಬೆಂಬಲವಾಗಿ ನಿಂತಿದೆ.
ಮೂರು ರೂಪಾಯಿ ದರದಲ್ಲಿ ಬಡತನ ರೇಖೆಗಿಂತ ಕೆಳಗಿನವರಿಗೆ ಮಾಸಿಕ 25 ಕೆ.ಜಿ. ಅಕ್ಕಿ ಮತ್ತು ಗೋಧಿ ನೀಡುವ ಯೋಜನೆಯನ್ನೂ ಮುಖರ್ಜಿಯವರು ಪ್ರಕಟಿಸಿದ್ದಾರೆ. ಜತೆಗೆ ಆಹಾರ ಭದ್ರತಾ ಕಾಯ್ದೆಯನ್ನೂ ಶೀಘ್ರದಲ್ಲೇ ಮಂಡಿಸಲಾಗುತ್ತದೆ ಎಂಬ ಮುನ್ಸೂಚನೆಯನ್ನೂ ಅವರು ಇದೇ ಸಂದರ್ಭದಲ್ಲಿ ನೀಡಿದರು.
ಖಾದ್ಯ ವಸ್ತುಗಳ ಸಬ್ಸಿಡಿ ನೀತಿಯಲ್ಲಿ ಬದಲಾವಣೆ, ಬಿಪಿಎಲ್ ಕುಟುಂಬಗಳಿಗೆ 350 ಕೋಟಿ ರೂಪಾಯಿ, 46 ಲಕ್ಷ ಬಡ ಕುಟುಂಬಗಳಿಗೆ ಆರೋಗ್ಯ ವಿಮೆ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 31,100 ಕೋಟಿ, ಅಸಂಘಟಿತ ವಲಯಗಳಿಗೆ ಸಾಮಾಜಿಕ ಭದ್ರತೆ, ಗ್ರಾಮೀಣ ಬ್ಯಾಂಕುಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ, ಗ್ರಾಮೀಣ ವಿದ್ಯುದೀಕರಣಕ್ಕೆ ಏಳು ಸಾವಿರ ಕೋಟಿ ರೂಪಾಯಿ, ಗ್ರಾಮ ಸಡಕ್ ಯೋಜನೆಯಲ್ಲಿ ಶೇಕಡಾ 59ರಷ್ಟು ಹೆಚ್ಚಳ, 100 ಕೋಟಿ ವೆಚ್ಚದಲ್ಲಿ ಆದರ್ಶ ಗ್ರಾಮ ಯೋಜನೆ, ಪ್ರದಾನಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆ ಜಾರಿ, 100 ಕೋಟಿ ರೂಪಾಯಿ ವೆಚ್ಚದಲ್ಲಿ ಆದರ್ಶ ಗ್ರಾಮ ಯೋಜನೆ ಮುಂತಾದ ಸಹಕಾರಿ ಯೋಜನೆಗಳನ್ನೂ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. |