ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿರುವ ನಿಷ್ಕ್ರಿಯ ಖಾತೆದಾರರ ಹಣವನ್ನು ಬಳಕೆ ಮಾಡುವ ಯಾವುದೇ ಯೋಜನೆಯಿಲ್ಲ ಎಂದು ಸರಕಾರ ಸೋಮವಾರ ಸ್ಪಷ್ಟಪಡಿಸಿದೆ.
ಪ್ರಸಕ್ತ ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ 3,837 ಕೋಟಿ ರೂಪಾಯಿಗಳಷ್ಟು ಮೊತ್ತ ಕೋರಿಕೆ ಬರದ ಕಾರಣ ಉಳಿದುಕೊಂಡಿದ್ದು, ಇದಕ್ಕೆ ಸಂಬಂಧಪಟ್ಟವರನ್ನು ಇಪಿಎಫ್‌ಓ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ.
"ನಿಷ್ಕ್ರಿಯವಾಗಿರುವ ಖಾತೆಗೆ ಸಂಬಂಧಪಟ್ಟ ಹಣ ಸದಸ್ಯರು ಅಥವಾ ಅವರ ಉತ್ತರಾಧಿಕಾರಿಗಳಿಗೆ ಸೇರಿದ್ದಾಗಿದ್ದು, ಅವರಿಂದ ಯಾವುದೇ ಕ್ಷಣದಲ್ಲಿ ಕೋರಿಕೆ ಬಂದರೂ ನೀಡಲಾಗುತ್ತದೆ. ಅದನ್ನು ಇತರ ಯಾವುದೇ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗದು" ಎಂದು ಲೋಕಸಭೆಗೆ ಉದ್ಯೋಗ ಖಾತೆ ರಾಜ್ಯ ಸಚಿವ ಹರೀಶ್ ರಾವತ್ ತಿಳಿಸಿದರು.
2008ರ ಮಾರ್ಚ್ 31ರ ವೇಳೆಗೆ ನಿಷ್ಕ್ರಿಯವಾಗಿರುವ ಖಾತೆಗಳ ನೌಕರರ ಭವಿಷ್ಯ ನಿಧಿಯ ಮೊತ್ತವು 3,837 ಕೋಟಿ ರೂಪಾಯಿಗಳನ್ನು ತಲುಪಿದೆ ಎಂದು ಅವರು ವಿವರಿಸಿದ್ದಾರೆ.
ನಿಷ್ಕ್ರಿಯ ಖಾತೆಗಳ ವಾರಸುದಾರರ ಅರ್ಜಿಗಳನ್ನು ಪರಿಶೀಲನೆ ನಡೆಸಬೇಕು ಮತ್ತು ಹಣ ನಿಜವಾದ ವಾರಸುದಾರರಿಗೆ ಸೇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಇಪಿಎಫ್‌ಓ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಲೋಕಸಭೆಗೆ ಲಿಖಿತ ಹೇಳಿಕೆ ನೀಡಿದ್ದಾರೆ.
ಉದ್ಯೋಗವನ್ನು ಬಿಟ್ಟ ಮೂರು ವರ್ಷಗಳ ನಂತರವೂ ಹಣವನ್ನು ಪಡೆಯದವರನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಮತ್ತು ಇತರ ಮಾರ್ಗಗಳ ಮೂಲಕ ಆಹ್ವಾನಿಸಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ.
|