ಸರಕಾರಿ ವೆಚ್ಚದಲ್ಲಿ ಮಾಡುವ ಎಲ್ಲಾ ರೀತಿಯ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸವನ್ನು ಅಧಿಕಾರಿಗಳು 'ಏರ್ ಇಂಡಿಯಾ'ದಲ್ಲೇ ಮಾಡಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯವು ಆದೇಶ ನೀಡಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ಬೆಂಬಲಕ್ಕೆ ನಿಂತಿದೆ.
"ಭಾರತ ಸರಕಾರದ ವೆಚ್ಚದಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಾಯು ಯಾನ ಮಾಡುವ ಸಂದರ್ಭ ಅಧಿಕಾರಿಗಳು ಕಡ್ಡಾಯವಾಗಿ ಏರ್ ಇಂಡಿಯಾನ್ನೇ ಆಶ್ರಯಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿದೆ" ಎಂದು ವಿತ್ತ ಸಚಿವಾಲಯ ಹೊರಡಿಸಿರುವ ನಿಯಮಾವಳಿ ಆದೇಶಿಸಿದೆ.
ಅಲ್ಲದೆ ಏರ್ ಇಂಡಿಯಾ ಸೇವೆಯಿಲ್ಲದ ಸ್ಥಳಗಳಿಗೆ ಪ್ರಯಾಣಿಸುವ ಸಂದರ್ಭದಲ್ಲಿ, ಪ್ರಯಾಣಿಸಬೇಕಾದ ಸ್ಥಳಕ್ಕೆ ಹತ್ತಿರವೆನಿಸುವ ಕೇಂದ್ರಕ್ಕೆ ಏರ್ ಇಂಡಿಯಾದ ಮೂಲಕ ಪ್ರಯಾಣಿಸಿ ಅಲ್ಲಿಂದ ಏರ್ ಇಂಡಿಯಾದ ಭಾಗೀದಾರ ಕಂಪನಿಯ ವಿಮಾನದಲ್ಲಿ ಪ್ರಯಾಣಿಸಲು ಹೆಚ್ಚು ಒತ್ತು ನೀಡಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಈ ನಿಯಮಗಳು ಭಾರತ ಸರಕಾರದಿಂದ ಆರ್ಥಿಕ ಸಹಕಾರ ಪಡೆಯುವ ಸ್ವಾಯತ್ತ ಸಂಸ್ಥೆಗಳ ಅಧಿಕಾರಿಗಳ ಪ್ರಯಾಣಕ್ಕೂ ಅನ್ವಯಿಸುತ್ತದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ನಿರ್ವಹಣೆ ಅಥವಾ ಅಲಭ್ಯತೆಯ ಕಾರಣಕ್ಕೆ ಅಥವಾ ಇನ್ಯಾವುದೇ ಕಾರಣಕ್ಕೂ ಈ ಆದೇಶವನ್ನು ಪಾಲಿಸದಿರುವ ಸಂದರ್ಭದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವಾಲಯಕ್ಕೆ ವಿನಾಯಿತಿಗಾಗಿ ಮನವಿ ಮಾಡಬೇಕು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
2008-09ರ ಆರ್ಥಿಕ ವರ್ಷದಲ್ಲಿ ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾವು 5,000 ಕೋಟಿ ರೂಪಾಯಿಗಳ ನಷ್ಟ ಅನುಭವಿಸುವ ಸಾಧ್ಯತೆಯಿದ ಎಂದು ಇತ್ತೀಚೆಗಷ್ಟೇ ರಾಜ್ಯ ಸಭೆಗೆ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಮಾಹಿತಿ ನೀಡಿದ್ದರು.
|