ಏಷ್ಯಾ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಚೇತರಿಕೆ ಕಂಡಿದ್ದರೂ ದುರ್ಬಲ ಜಾಗತಿಕ ಆರ್ಥಿಕತೆ ಕಾರಣ ಹತಾಶೆ ಮುಂದುವರಿದಿದ್ದು, ಇನ್ನಷ್ಟು ಏರಿಕೆಯಾಗುವುದೇ ಎಂಬುದನ್ನು ಮಾರುಕಟ್ಟೆ ಎದುರು ನೋಡುತ್ತಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ನ್ಯೂಯಾರ್ಕ್ ಪ್ರಮುಖ ಒಪ್ಪಂದದ ಆಗಸ್ಟ್ ವಿತರಣೆಯಲ್ಲಿ ಸಾದಾ ಕಚ್ಚಾ ತೈಲವು ಪ್ರತೀ ಬ್ಯಾರೆಲ್ ಒಂದಕ್ಕೆ 38 ಸೆಂಟ್ಸ್‌ಗಳ ಏರಿಕೆ ದಾಖಲಿಸಿ 60.07 ಅಮೆರಿಕನ್ ಡಾಲರ್ ಬೆಲೆ ತಲುಪಿದೆ. ಬ್ರೆಂಟ್ ನಾರ್ತ್ ಸೀ ತೈಲದ ಆಗಸ್ಟ್ ವಿತರಣೆಯು 39 ಸೆಂಟ್ಸ್‌ಗಳ ಹೆಚ್ಚಳದೊಂದಿಗೆ 61.08 ಡಾಲರುಗಳನ್ನು ಮುಟ್ಟಿದೆ.
ಜಾಗತಿಕ, ಅದರಲ್ಲೂ ಅಮೆರಿಕಾದ ಆರ್ಥಿಕ ಪರಿಸ್ಥಿತಿ ಸುಧಾರಣೆಯ ವೇಗದ ಕುರಿತು ಕಳವಳ ಹೊಂದಿದ್ದ ಕಾರಣದಿಂದಾಗಿ ಎರಡೂ ಒಪ್ಪಂದಗಳು ಹಿಂದಿನ ದಿನ ತೀರಾ ಕಡಿಮೆ ದರದೊಂದಿಗೆ ವ್ಯವಹಾರ ಅಂತ್ಯಗೊಳಿಸಿದ್ದವು.
ಅಮೆರಿಕಾದ ಇಂಧನ ಬೇಡಿಕೆಯ ಕುರಿತು ಎಚ್ಚರಿಕೆವಹಿಸುತ್ತಿರುವ ಕಾರಣ ಯಾವುದೇ ಏರಿಕೆಗಳಿಗೆ ತಡೆಯಾಗುತ್ತಿದೆ ಮತ್ತು ಇದು ಸ್ವಭಾವತಃ ತೀರಾ ತಾತ್ಕಾಲಿಕವಾದುದು ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಅಮೆರಿಕಾವು ವಿಶ್ವದ ಬೃಹತ್ ಆರ್ಥಿಕ ಶಕ್ತಿಯಾಗಿದ್ದು, ಇಂಧನ ಗ್ರಾಹಕ ನೆಲೆಯಲ್ಲೂ ಇದು ಅತಿ ದೊಡ್ಡ ಬಳಕೆದಾರ.
"ತೈಲ ಮಾರುಕಟ್ಟೆಯು ಮುಂದುವರಿದ ರಾಷ್ಟ್ರಗಳ ಆರ್ಥಿಕ ಚೇತರಿಕೆಯ ಬಗ್ಗೆ ಕಳವಳಗಳನ್ನು ಹೊಂದಿದ್ದು, ನಿಧಾನವಾಗಿ ಸಮಸ್ಥಿತಿಗೆ ಬರುವ ಸಾಧ್ಯತೆಗಳಿವೆ" ಎಂದು ಸಿಡ್ನಿಯ ಡೇವಿಡ್ ಮೂರ್ ಅಭಿಪ್ರಾಯಪಟ್ಟಿದ್ದಾರೆ.
|