ದೀಪಾವಳಿ ನಂತರ ಬಡ್ಡಿ ದರದಲ್ಲಿ ಶೇಕಡಾ .25ರಿಂದ ಶೇಕಡಾ 1ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ದೇಶದ ಅತಿ ದೊಡ್ಡ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್ ಮುನ್ಸೂಚನೆ ನೀಡಿದೆ.
ಎಸ್‌ಬಿಐ ಅಧ್ಯಕ್ಷ ಒ.ಪಿ. ಭಟ್ ಮಾತನಾಡುತ್ತಾ, "ನಾನಂದುಕೊಂಡಂತೆ ಆರ್ಥಿಕ ಪ್ರಗತಿಯ ಜತೆ ಸಾಲದ ಬೇಡಿಕೆ ಪ್ರಮಾಣ ಹೆಚ್ಚಾದಲ್ಲಿ ಬಡ್ಡಿ ದರವೂ ಹೆಚ್ಚಾಗಲಿದೆ. ಇದು ಸಾಲವನ್ನಾಧರಿಸಿ ಆಡಳಿತ ತೆಗೆದುಕೊಳ್ಳುವ ನಿರ್ಧಾರವನ್ನು ಅವಲಂಬಿಸಿದೆ" ಎಂದಿದ್ದಾರೆ.
ಬಡ್ಡಿ ದರ ಏರಿಕೆಯ ಪರಿಣಾಮ ಬೀಳುವುದು ಎಸ್‌ಬಿಐಯ ಹೊಸ ಗೃಹ ಸಾಲದ ಮೇಲೆ. ಈ ಹೊಸ ಗೃಹ ಸಾಲದ ಪ್ರಕಾರ 30 ಲಕ್ಷ ರೂಪಾಯಿವರೆಗಿನ ಮೊತ್ತಕ್ಕೆ ಆರಂಭಿಕ ವರ್ಷ ಶೇಕಡಾ 8, ಎರಡು ಮತ್ತು ಮೂರನೇ ವರ್ಷ ಶೇಕಡಾ 9ರಷ್ಟು ಬಡ್ಡಿ ವಿಧಿಸಲಾಗುತ್ತದೆ.
ಭಾರತೀಯ ಸ್ಟೇಟ್ ಬ್ಯಾಂಕ್ ಸಾಲದ ಮೇಲಿನ ಕಡಿಮೆ ಬಡ್ಡಿ ದರದಿಂದಾಗಿ ಪ್ರತಿ ತಿಂಗಳು 100 ಕೋಟಿ ರೂಪಾಯಿ ನಷ್ಟ ಅನುಭವಿಸುತ್ತಿದೆ. ಕಳೆದ ಕೆಲವು ಅವಧಿಗಳಿಂದ ಎಸ್‌ಬಿಐನ ಒಟ್ಟು ಬಡ್ಡಿ ದರ ಮಿತಿಯು 3.16ರಿಂದ 2.32ಕ್ಕೆ ಇಳಿದಿದೆ. ಇದು ಕನಿಷ್ಠ 2.5ರಲ್ಲಿ ನಿಂತರೆ ಸಮಾಧಾನಕರ ಎಂದೂ ಭಟ್ ತಿಳಿಸಿದ್ದಾರೆ.
ಬಡ್ಡಿ ದರ ಏರಿಕೆಯಾದಲ್ಲಿ ಮೂರು ವರ್ಷಗಳ ನಂತರ 30 ಲಕ್ಷ ರೂಪಾಯಿವರೆಗಿನ ಸಾಲಕ್ಕೆ ಶೇಕಡಾ 9.75 ಹಾಗೂ 30 ಲಕ್ಷ ರೂ.ಗಿಂತ ಹೆಚ್ಚಿನ ಸಾಲಕ್ಕೆ ಶೇಕಡಾ 10.75ರ ಬಡ್ಡಿ ದರವರನ್ನು ವಿಧಿಸಬೇಕಾಗಬಹುದು.
ಅಲ್ಲದೆ ಎಸ್‌ಬಿಐ ಶೀಘ್ರದಲ್ಲೇ ನಾನ್-ಲೈಫ್ ಇನ್ಸುರೆನ್ಸ್ ವ್ಯವಹಾರವನ್ನೂ ಆರಂಭಿಸಲಿದೆ. ಅದಕ್ಕಾಗಿ ಬ್ಯಾಂಕ್ ಈಗಾಗಲೇ ಇನ್ಸುರೆನ್ಸ್ ಪ್ರಾಧಿಕಾರದಿಂದ ತಾತ್ವಿಕ ಅನುಮೋದನೆ ಪಡೆದುಕೊಂಡಿದೆ ಎಂದು ಭಟ್ ತಿಳಿಸಿದ್ದಾರೆ. ಮುಂದಿನ ವರ್ಷದ ಆರಂಭದಲ್ಲಿ ಇನ್ಸುರೆನ್ಸ್ ವ್ಯವಹಾರ ಆರಂಭಿಸುವ ನಿರೀಕ್ಷೆ ಬ್ಯಾಂಕ್‌ನದ್ದು.
|