ಮೂರು ವರ್ಷಗಳ ಹಿಂದೆ ಗೂಗಲ್ ನೀಡಿದ್ದ ಆನ್‌ಲೈನ್ 'ಗೂಗಲ್ ಡಾಕ್ಸ್'ಗೆ ಪ್ರತಿಯಾಗಿ ಮುಂದಿನ ವರ್ಷ ಮೈಕ್ರೋಸಾಫ್ಟ್ ತನ್ನ 'ಆಫೀಸ್' ತಂತ್ರಾಂಶದ ವೆಬ್ ಆವೃತ್ತಿಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ.
ವಿಶ್ವದ ಸಾಫ್ಟ್‌ವೇರ್ ದೈತ್ಯ ಮೈಕ್ರೋಸಾಫ್ಟ್ 2010ರಲ್ಲಿ ವರ್ಡ್ ಪ್ರೊಸೆಸರ್, ಸ್ಪ್ರೆಡ್‌ಶೀಟ್, ಪ್ರೆಸೆಂಟೇಷನ್ ಸಾಫ್ಟ್‌ವೇರ್ ಮತ್ತು ನೋಟ್ ಬರೆಯುವ ಸಾಫ್ಟ್‌ವೇರ್‌ಗಳನ್ನು ನೀಡಲಿದೆ. ಇದು ಗೂಗಲ್ ಈ ಹಿಂದೆ ನೀಡಿದ್ದ ಆನ್-ಲೈನ್ ಸಾಫ್ಟ್‌ವೇರ್‌ಗಳಂತೆಯೇ ಇರುತ್ತದೆ ಎಂದು ಹೇಳಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಗೂಗಲ್ ಮತ್ತು ಮೈಕ್ರೋಸಾಫ್ಟ್ ನಡುವೆ ಸಾಫ್ಟ್‌ವೇರ್ ಸಮರ ನಡೆಯುತ್ತಿರುವ ಕಾರಣ ಗ್ರಾಹಕರಿಗೆ ಹೆಚ್ಚಿನ ಉಪಯೋಗವಾಗಬಹುದೆಂಬ ಮಾತು ಮಾರುಕಟ್ಟೆಯಲ್ಲಿ ಕೇಳಿ ಬರುತ್ತಿದೆ.
2007ರಲ್ಲಿ ಉಚಿತ ಆನ್-ಲೈನ್ 'ಗೂಗಲ್ ಡಾಕ್ಸ್' ಮೂಲಕ ಅತ್ಯುತ್ತಮ ಸೇವೆ ನೀಡಿದ್ದ ಗೂಗಲ್‌ಗೆ ಪ್ರತಿಯಾಗಿ ಇದೀಗ ಮೈಕ್ರೋಸಾಫ್ಟ್ ಆಫೀಸ್‌ನ ಉಚಿತ ವೆಬ್ ತಂತ್ರಾಂಶವನ್ನು ನೀಡಲು ಹೊರಟಿದೆ. ಇಂಟರ್ನೆಟ್ ಪುಟದಲ್ಲಿ 'ಡಾಕ್ಸ್'ನ್ನು ತೆರೆದಲ್ಲಿ ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಗ್‌ಗಳಲ್ಲಿ ಮಾಡಬಹುದಾದ ಕೆಲಸಗಳನ್ನು ಆನ್-ಲೈನ್‌ನಲ್ಲೇ ಮಾಡಬಹುದಾಗಿದೆ.
ಇಷ್ಟೇ ಅಲ್ಲದೆ ಇಂಟರ್ನೆಟ್ ಎಕ್ಸ್‌ಪ್ಲೋರರ್ ಬದಲಿಗೆ ಗೂಗಲ್ ಕ್ರೋಮ್ ಬ್ರೌಸರ್, ಗೂಗಲ್ ಸರ್ಚ್ ಇಂಜಿನ್‌ಗೆ ಪ್ರತಿಯಾಗಿ ಮೈಕ್ರೋಸಾಫ್ಟ್ 'ಬಿಂಗ್' ಎನ್ನುವ ಸರ್ಚ್ ಇಂಜಿನ್, ವಿಂಡೋಸ್ ಆಪರೇಂಟಿಂಗ್ ಸಿಸ್ಟಂಗೆ ಪೈಪೋಟಿ ನೀಡಲು ಗೂಗಲ್ ಕ್ರೋಮ್ ಆಪರೇಟಿಂಗ್ ಸಿಸ್ಟಂ... ಹೀಗೆ ಪ್ರತೀ ವಲಯದಲ್ಲೂ ಈ ಎರಡು ಸಾಫ್ಟ್‌ವೇರ್ ಕಂಪನಿಗಳು ಗುದ್ದಾಡುತ್ತಿವೆ.
ಮೂಲಗಳ ಪ್ರಕಾರ ಆಫೀಸ್‌ನ ಉಚಿತ ಆವೃತ್ತಿಯನ್ನು ಬಿಡುಗಡೆ ಮಾಡುವ ಕಾರಣದಿಂದಾಗಿ ಅತೀ ಹೆಚ್ಚು ವ್ಯವಹಾರವನ್ನು ಮಾಡುವ ಈ ವಿಭಾಗವು ನಷ್ಟವನ್ನನುಭವಿಸಲಿದೆ. ಇದರ ಹೋಮ್ ಆವೃತ್ತಿಯನ್ನು ಈಗಲೂ 150 ಡಾಲರ್‌ಗಳಿಗೆ ಈಗ ಮಾರಾಟ ಮಾಡಲಾಗುತ್ತಿದೆ.
'ಆಫೀಸ್ 2010'ನ್ನು ಬಿಡುಗಡೆ ಮಾಡಿದ ನಂತರ ಅದರ ಉಚಿತ ವೆಬ್ ಆವೃತ್ತಿ ತಂತ್ರಾಂಶವನ್ನೂ ಮೈಕ್ರೋಸಾಫ್ಟ್ ಬಿಡುಗಡೆ ಮಾಡಲಿದೆ. ಮುಂದಿನ ವರ್ಷದ ಮಧ್ಯ ಭಾಗದಲ್ಲಿ ಮಾರುಕಟ್ಟೆಗೆ ಬರಲಿದೆ ಎಂದು ಕಂಪನಿ ತಿಳಿಸಿದೆ. ಪ್ರಸಕ್ತ ಆಫೀಸ್ ಆವೃತ್ತಿಯು 2007ರ ಜನವರಿಯಲ್ಲಿ ಬಿಡುಗಡೆಯಾಗಿತ್ತು.
|