ಸಾಮಾಜಿಕ ಬದ್ಧತೆಗಳೊಂದಿಗೆ ವ್ಯವಹಾರ ನಡೆಸುವವರನ್ನು ಪ್ರೋತ್ಸಾಹಿಸುವ 'ಜಿಎಸ್‌ಸಿಎಲ್‌ಜಿ' ಎಂಬ ಸಂಸ್ಥೆಯೊಂದು ಪೆಪ್ಸಿಕೋ ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಂದ್ರಾ ನೂಯಿಯವರನ್ನು '2009ರ ಸಿಇಓ' ಎಂದು ಹೆಸರಿಸಿದೆ.
ಕಾರ್ಪೊರೇಟ್ ಜಗತ್ತಿಗೆ ಮಹತ್ವದ ಜವಾಬ್ದಾರಿಯುತ ಕೊಡುಗೆಗಳನ್ನು ನೀಡಿದುದು, ಜಾಗತಿಕ ತಾಪಮಾನ ಏರಿಕೆ ವಿರುದ್ಧ ಹೋರಾಟ, ಸಮಾಜ ಸೇವೆಗಳಲ್ಲಿ ಭಾಗಿಯಾಗಿರುವುದು, ಜಾಗತಿಕರಣಗೊಂಡ ಆರ್ಥಿಕತೆಗೆ ಅಮೆರಿಕಾದಲ್ಲಿ ಉದ್ಯೋಗ ಸೃಷ್ಟಿ ಮಾಡಿರುವುದು ಮುಂತಾದ ಸೇವೆಗಳನ್ನು ಗುರುತಿಸಿ 'ವರ್ಷದ ಮುಖ್ಯ ಕಾರ್ಯನಿರ್ವಹಣಾಧಿಕಾರಿ' ಎಂಬ ಪ್ರಶಸ್ತಿಗೆ ನೂಯಿಯವರನ್ನು ಪರಿಗಣಿಸಲಾಗಿದೆ.
ಅಮೆರಿಕಾ ಮೂಲದ ಜಿಎಸ್‌ಸಿಎಲ್‌ಜಿ ಸಂಸ್ಥೆಯಲ್ಲಿ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳ ತಂಡ, ಮ್ಯಾಗಜಿನ್‌ಗಳ ಸಂಪಾದಕರು, ಆಯ್ದ ಸಲಹೆಗಾರರು ಮತ್ತು ಇತರ ಪೂರೈಕೆಯ ಮುಖಂಡರು ಒಳಗೊಂಡಿದ್ದಾರೆ.
ಇತ್ತೀಚೆಗಷ್ಟೇ ಅಮೆರಿಕಾದ ನಿಯತಕಾಲಿಕ ಪ್ರಕಟಿಸಿದ 'ಫಾರ್ಚೂನ್ 500 ಸಿಇಓ' ಪಟ್ಟಿಯ ಮಹಿಳೆಯರಲ್ಲಿ ನೂಯಿ ಅಗ್ರ ಸ್ಥಾನ ಪಡೆದುಕೊಂಡಿದ್ದರು. ಇಲ್ಲಿ ಒಟ್ಟಾರೆ 13 ಮಹಿಳಾ ಸಿಇಓಗಳು ಸ್ಥಾನ ಗಿಟ್ಟಿಸಿದ್ದರು.
|