ಉದ್ಯೋಗಿಯೊಬ್ಬನಿಗೆ ಎಚ್1ಎನ್1 ಸೋಂಕು ತಗುಲಿದ್ದು ಖಚಿತಪಟ್ಟ ನಂತರ ಹೈದರಾಬಾದ್‌ನಲ್ಲಿನ ಗೂಗಲ್ ಭಾರತೀಯ ಕಚೇರಿಯೊಂದನ್ನು ಮುಚ್ಚಲಾಗಿದೆ.
ಇದು ಒಪ್ಪಂದದ ಮೇರೆಗೆ ಕಾರ್ಯನಿರ್ವಹಿಸುವ ಉದ್ಯೋಗಿಗಳನ್ನು ಹೊಂದಿರುವ ತನ್ನ ಸ್ಯಾಟಲೈಟ್ ಕಚೇರಿಯಾಗಿದ್ದು, ಕೇವಲ ಕೆಲವು ದಿನಗಳ ಮಟ್ಟಿಗೆ ಮಾತ್ರ ಕಚೇರಿ ಮುಚ್ಚಿರುತ್ತದೆ ಎಂದು ಗೂಗಲ್ ಸಂಸ್ಥೆ ಸ್ಪಷ್ಟಪಡಿಸಿದೆ.
"ಹೈದರಾಬಾದ್‌ನ ಕಚೇರಿಯೊಂದರ ನಮ್ಮ ಕಾಂಟ್ರಾಕ್ಟ್ ಉದ್ಯೋಗಿಯೊಬ್ಬರಿಗೆ ಹಂದಿಜ್ವರ ಸೋಂಕು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ಸಂಪೂರ್ಣ ವೈದ್ಯಕೀಯ ವ್ಯವಸ್ಥೆಯಲ್ಲಿಡಲಾಗಿದೆ. ಹಾಗಾಗಿ ಮುನ್ನೆಚ್ಚೆರಿಕೆಯ ಕ್ರಮವಾಗಿ ನಾವು ಹೈದರಾಬಾದ್‌ನಲ್ಲಿನ ಕಚೇರಿಯನ್ನು ಎರಡು ದಿನಗಳವರೆಗೆ (ಜುಲೈ 14 ಮತ್ತು 15) ಮುಚ್ಚಿರುತ್ತೇವೆ. ನಮ್ಮ ಎಲ್ಲಾ ಉದ್ಯೋಗಿಗಳ ಸುರಕ್ಷತೆ ಸೇರಿದಂತೆ ಅಗತ್ಯ ಕ್ರಮಗಳನ್ನು ನಾವು ಕೈಗೊಳ್ಳಲಿದ್ದೇವೆ" ಎಂದು ಗೂಗಲ್ ವಕ್ತಾರರು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಹೈದರಾಬಾದ್‌ನಲ್ಲಿ ಇದುವರೆಗೆ 23 ಹಂದಿ ಜ್ವರ ಸೋಂಕು ತಗುಲಿರುವ ಪ್ರಕರಣಗಳು ವರದಿಯಾಗಿವೆ.
ಗೂಗಲ್‌ನ ಹೈದರಾಬಾದ್ ಕಚೇರಿಯಲ್ಲಿ 250 ಸಿಬಂದಿಗಳಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇದನ್ನು ಬಹಿರಂಗಪಡಿಸಲು ಗೂಗಲ್ ವಕ್ತಾರರು ನಿರಾಕರಿಸಿದ್ದು, ಅವರೆಲ್ಲರನ್ನೂ ಜವಾಬ್ದಾರಿಯಿಂದ ದೂರ ಉಳಿಯುವಂತೆ ಸೂಚಿಸಲಾಗಿದೆ ಎಂದಷ್ಟೇ ತಿಳಿಸಿದರು.
|