ಜಾಗತಿಕ ಹಿಂಜರಿತದ ಹೊರತಾಗಿಯೂ ದಾಸ್ತಾನುದಾರರು ಮತ್ತು ಆಭರಣಕಾರರು ಖರೀದಿಗೆ ಮುಂದಾದ ಕಾರಣ ಸತತ ಮೂರನೇ ದಿನವೂ ಚಿನಿವಾರ ಪೇಟೆಯು ಮುನ್ನಡೆ ದಾಖಲಿಸಿದ್ದು, ಪ್ರತೀ 10 ಗ್ರಾಂಗಳಿಗೆ 25 ರೂಪಾಯಿಗಳಂತೆ 14,830 ರೂಪಾಯಿಗಳನ್ನು ತಲುಪಿದೆ.
ಈ ಹಿಂದಿನ ಎರಡು ಅವಧಿಗಳ ನಂತರ ಚಿನ್ನವು ಪ್ರಸಕ್ತ ಮಾರುಕಟ್ಟೆಯಲ್ಲಿ 115 ರೂಪಾಯಿಗಳಷ್ಟು ದುಬಾರಿಯಾಗಿದೆ.
ಕೈಗಾರಿಕಾ ವಲಯದಿಂದ ಪ್ರಬಲ ಬೇಡಿಕೆ ಬಂದ ಕಾರಣ ಬೆಳ್ಳಿ ದರವು ಪ್ರತೀ ಕೆ.ಜಿ.ಗೆ 200 ರೂಪಾಯಿಗಳಂತೆ ಏರಿಕೆ ಕಂಡಿದ್ದು, 21,700 ರೂಪಾಯಿಗಳನ್ನು ದಾಖಲಿಸಿತು.
ಹಬ್ಬಗಳ ಅವಧಿ ಮತ್ತು ಕಡಲಾಚೆಗಿನ ಧೋರಣೆಗಳನ್ನು ಮನಗಂಡ ದಾಸ್ತಾನುದಾರರು ಮತ್ತು ಆಭರಣ ತಯಾರಕರು ಚಿನ್ನ ಕೊಳ್ಳಲು ಮುಂದೆ ಬಂದ ಕಾರಣ ಚಿನ್ನದ ಬೆಲೆ ಮೇಲಕ್ಕೇರಿತು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಕಚ್ಚಾ ತೈಲಗಳ ಬೆಲೆಯೇರಿಕೆ ಮತ್ತು ದುರ್ಬಲ ಡಾಲರುಗಳ ಕಾರಣದಿಂದ ಬದಲಿ ಹೂಡಿಕೆಯತ್ತ ಉದ್ಯಮವು ಒಲವು ತೋರಿದ ಕಾರಣ ಲಂಡನ್‌ನಲ್ಲಿ ಚಿನ್ನದ ಬೆಲೆಯು ಸತತ ನಾಲ್ಕನೇ ದಿನವೂ ಏರಿಕೆ ಕಂಡಿತು. ಪ್ರತಿ ಔನ್ಸ್‌ಗೆ 1.50 ಡಾಲರುಗಳಂತೆ ಏರಿಕೆ ಕಂಡ ಚಿನ್ನ ದರವು 921.80 ಡಾಲರುಗಳನ್ನು ದಾಖಲಿಸಿದೆ.
ದೇಶೀಯ ಮಾರುಕಟ್ಟೆಯಲ್ಲಿ ಉತ್ಕೃಷ್ಟ ಚಿನ್ನ ಮತ್ತು ಆಭರಣಗಳ ದರದಲ್ಲಿ ತಲಾ 25 ರೂಪಾಯಿಗಳ ಏರಿಕೆ ಕಂಡಿದ್ದು ಕ್ರಮವಾಗಿ 14,830 ರೂಪಾಯಿ ಮತ್ತು 14,680 ರೂಪಾಯಿಗಳನ್ನು ಪ್ರತಿ 10 ಗ್ರಾಂಗಳಿಗೆ ದಾಖಲಿಸಿದೆ. ಪವನ್ ಚಿನ್ನದಲ್ಲೂ ಅಷ್ಟೇ ಏರಿಕೆ ದಾಖಲಿಸಿದ್ದು, ಎಂಟು ಗ್ರಾಂಗಳಿಗೆ 12,350 ರೂಪಾಯಿಗಳನ್ನು ಹೊಂದಿದೆ.
|