ಅಕ್ರಮ ದಾಸ್ತಾನು ಮಾಡುವುದನ್ನು ತಪ್ಪಿಸುವ ಸಲುವಾಗಿ ಪಶ್ಚಿಮ ಬಂಗಾಲ ಸರಕಾರವು ಆಲೂಗಡ್ಡೆಯನ್ನು ಅತ್ಯಗತ್ಯ ವಸ್ತುಗಳ ಸಾಲಿಗೆ ಸೇರಿಸಿ ಆದೇಶ ಹೊರಡಿಸಿದೆ.
ಇದರಿಂದಾಗಿ ಆಲೂಗಡ್ಡೆ ದರವನ್ನು ಸ್ಥಿರವಾಗಿ ಉಳಿಸುವ ಸಲುವಾಗಿ ದಿಟ್ಟ ನಿರ್ಧಾರವೊಂದನ್ನು ಸರಕಾರ ಕೈಗೊಂಡಿದ್ದು, ನಿಗದಿತ ಮಟ್ಟಕ್ಕಿಂತ ಹೆಚ್ಚು ಆಲೂಗಡ್ಡೆಯನ್ನು ದಾಸ್ತಾನು ಮಾಡುವುದನ್ನು ತಪ್ಪಿಸಿದಂತಾಗಿದೆ.
ಇನ್ನು ಮುಂದೆ ಸರಕಾರ ಅನುಮತಿ ನೀಡಿದಷ್ಟು ಮಾತ್ರ ಆಲೂಗಡ್ಡೆ ದಾಸ್ತಾನು ಮಾಡಲು ಅವಕಾಶವಿದೆ ಮತ್ತು ಸರಕಾರವು ಗೋಡೌನ್‌ಗಳನ್ನು ಪರಿಶೀಲನೆ ನಡೆಸಬಹುದಾಗಿದೆ.
ರಾಜ್ಯದ ಕೆಲವು ನಗರಗಳ ಮಾರುಕಟ್ಟೆಗಳಲ್ಲಿ 13 ರೂಪಾಯಿಗಳಿಗೆ ಒಂದು ಕಿಲೋ ಆಲೂಗಡ್ಡೆಯನ್ನು ಮಾರಾಟ ಮಾಡಿದ ಒಂದು ವಾರದ ನಂತರ ಸರಕಾರ ಈ ತೀರ್ಮಾನವನ್ನು ತೆಗೆದುಕೊಂಡಿದೆ.
ಈ ನಿಯಮದ ಪ್ರಕಾರ ಸಗಟು ಮಾರಾಟಗಾರರು 400 ಕ್ವಿಂಟಾಲ್ ಹಾಗೂ ಚಿಲ್ಲರೆ ಮಾರಾಟಗಾರರು 30 ಕ್ವಿಂಟಾಲ್ ಆಲೂಗಡ್ಡೆಯನ್ನು ಮಾತ್ರ ಶೇಖರಿಸಿಡಬಹುದಾಗಿದೆ.
ಕೊಲ್ಕತ್ತಾ ಪೊಲೀಸ್ ಅಧೀಕ್ಷಕರು ಎಲ್ಲಾ ಆಲೂಗಡ್ಡೆ ಸಗಟು ಮಾರಾಟಗಾರರಿಗೆ ಸರಕಾರದ ಆದೇಶವನ್ನು ತಲುಪಿಸಲಿದ್ದಾರೆ ಎಂದು ರಾಜ್ಯದ ಹಣಕಾಸು ಸಚಿವ ಆಸಿಮ್ ದಾಸ್‌ಗುಪ್ತಾ ತಿಳಿಸಿದ್ದಾರೆ. ಜಿಲ್ಲೆಗಳಲ್ಲಿ ಜಿಲ್ಲಾ ಅಧೀಕ್ಷಕರು ಈ ಕೆಲಸವನ್ನು ಮಾಡಲಿದ್ದಾರೆ.
|