ಏರ್ ಇಂಡಿಯಾ ಪೈಲಟ್‌ಗಳು ಮತ್ತು ಗಗನಸಖಿಯರು ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭಗಳಲ್ಲಿ ವಿದೇಶಿ ಹೊಟೇಲ್‌ಗಳಲ್ಲಿ ತಂಗುವ ಬದಲು, ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅವರು ವಾಪಸು ಬರುವ ವಿಮಾನದಲ್ಲಿ ಮಾಮೂಲಿ ಪ್ರಯಾಣಿಕರಂತೆ ದೇಶಕ್ಕೆ ಮರಳಬೇಕು ಎಂಬ ಹೊಸ ನೀತಿಯನ್ನು ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಜಾರಿಗೆ ತರುವ ಸಾಧ್ಯತೆಗಳಿವೆ.
ಅಲ್ಲದೆ ಏರ್ ಇಂಡಿಯಾ ವಿಮಾನವನ್ನು ಪರೀಕ್ಷಿಸಲು ವಿದೇಶದಲ್ಲಿ ತಾತ್ಕಾಲಿಕ ಹುದ್ದೆಗಳಲ್ಲಿರುವ ಇಂಜಿನಿಯರ್‌ಗಳಿಗೂ ಕೊಕ್ ಕೊಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ವಿಮಾನದ ಇಂಜಿಯನಿಯರ್‌ಗಳು ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ವಿಮಾನದಲ್ಲೇ ಪ್ರಯಾಣಿಸಿ, ಹಾರಾಟದ ಮೊದಲು ವಿಮಾನವನ್ನು ಪರಿಶೀಲನೆ ನಡೆಸಲಿದ್ದಾರೆ. ನಂತರ ಅದೇ ವಿಮಾನದಲ್ಲಿ ವಾಪಸು ಬರಲಿದ್ದಾರೆ. ಆ ಮೂಲಕ ವಿದೇಶದಲ್ಲಿ ಅವರಿಗಾಗಿ ವೆಚ್ಚ ಮಾಡಲಾಗುತ್ತಿರುವ ಬೃಹತ್ ಮೊತ್ತವನ್ನು ಉಳಿಸುವ ನಿರ್ಧಾರಕ್ಕೆ ಏರ್ ಇಂಡಿಯಾ ಬಂದಿದೆ ಎನ್ನಲಾಗಿದೆ.
ಪೈಲಟ್‌ಗಳು, ವೈಮಾನಿಕ ಸಿಬಂದಿಗಳು ಮತ್ತು ಇಂಜಿಯನಿಯರ್‌ಗಳನ್ನೊಳಗೊಂಡ ಕೆಲವು ಸಂಘಟನೆಗಳು ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲು ಸಹಕಾರ ನೀಡಿ ಮುಂದೆ ಬಂದಿವೆ. ವಿದೇಶದಲ್ಲಿ ಸಿಬಂದಿಯೊಬ್ಬರಿಗೆ 200 ಡಾಲರ್ ದೈನಂದಿನ ಭತ್ಯೆ ಮತ್ತು ಹೊಟೇಲಿಗೆ 200ರಿಂದ 400 ಡಾಲರುಗಳಷ್ಟು ಖರ್ಚು ಮಾಡಲಾಗುತ್ತಿದೆ. ವಿದೇಶದಲ್ಲಿ ಸಿಬ್ಬಂದಿಗಳು ತಂಗುವುದರಿಂದ ದೊಡ್ಡ ಹೊಡೆತವೇ ಬೀಳುತ್ತದೆ. ಅವರು ಅದೇ ವಿಮಾನದಲ್ಲಿ ವಾಪಸು ಬರುವುದರಿಂದ ದುಂದು ವೆಚ್ಚವನ್ನು ತಡೆಯಬಹುದಾಗಿದೆ ಎಂದು ನಿಕಟ ಮೂಲಗಳು ತಿಳಿಸಿವೆ.
ಈ ನೀತಿಯನ್ನು ಜೆಟ್ ಏರ್‌ವೇಸ್ ಕೆಲವು ತಿಂಗಳ ಹಿಂದೆಯೇ ಗಲ್ಫ್ ಮತ್ತು ದಕ್ಷಿಣ ಏಷ್ಯಾ ಪ್ರಯಾಣದಲ್ಲಿ ಆರಂಭಿಸಿತ್ತು. ಹೊಟೇಲ್ ಖರ್ಚು ವೆಚ್ಚಗಳು ಮತ್ತು ದೈನಂದಿನ ಭತ್ಯೆಗಳನ್ನು ಉಳಿಸಲು ಇದು ಸುಲಭ ಮಾರ್ಗ ಎಂದು ಹೇಳಲಾಗುತ್ತಿದೆ.
|