ಕೃಷಿ ಭೂಮಿಯನ್ನು ಸಮತಟ್ಟುಗೊಳಿಸುವ ಲೇಸರ್ ಯಂತ್ರವೊಂದನ್ನು ಅಂತಾರಾಷ್ಟ್ರೀಯ ಸಂಶೋಧನಾ ಸಂಸ್ಥೆಯೊಂದಿಗೆ ಸೇರಿಕೊಂಡ ತಮಿಳುನಾಡು ಭತ್ತ ಸಂಶೋಧನಾ ಸಂಸ್ಥೆಯು ಇಲ್ಲಿನ ಅದುತುರೈ ಎಂಬಲ್ಲಿ ಅಭಿವೃದ್ಧಿಪಡಿಸಿದೆ.
ಟ್ರ್ಯಾಕ್ಟರ್ ಯಂತ್ರಕ್ಕೆ ಜೋಡಿಸಲಾಗುವ ಈ ನೂತನ ಯಂತ್ರವನ್ನು ಇತ್ತೀಚೆಗೆ ತಿರುಪನಿಪೇಟೈ ಸಮೀಪದ ರೈತರ ಕೃಷಿ ಭೂಮಿಯಲ್ಲಿ ಪರಿಶೀಲನೆ ನಡೆಸಲಾಯಿತು.
ಒಂದು ಬಾರಿ ಭೂಮಿಯನ್ನು ಕೃಷಿ ಭೂಮಿಯನ್ನು ಮಟ್ಟಸಗೊಳಿಸಿದರೆ ಅದು ಏಳು ವರ್ಷಗಳವರೆಗೆ ಅದೇ ರೀತಿ ಉಳಿದುಕೊಳ್ಳುತ್ತದೆ. ಉಬ್ಬು ತಗ್ಗುಗಳಿರುವ ಭೂಮಿಗೆ ಬೇಕಾಗುವುದಕ್ಕಿಂತ ಕಡಿಮೆ ಪ್ರಮಾಣದ ನೀರು ಸಮತಟ್ಟು ಮಾಡಲಾದ ಕೃಷಿ ಭೂಮಿಗೆ ಸಾಕು ಎಂದು ಸಂಸ್ಥೆಯ ನಿರ್ದೇಶಕ ಜಬರಾಜ್ ಕೃಷಿಕರಿಗೆ ವಿವರಿಸಿದ್ದಾರೆ.
ಸಮತಟ್ಟುಗೊಳಿಸದ ಭೂಮಿಯಲ್ಲಿ ನೀರು ನಿಂತಲ್ಲೇ ನಿಲ್ಲುವುದರಿಂದ ಫಸಲಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದರೆ ಭೂಮಿಯನ್ನು ಸಮತಟ್ಟುಗೊಳಿಸುವುದರಿಂದ ಇಂತಹ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು ಮತ್ತು ಹೆಚ್ಚಿನ ಬೆಳೆ ತೆಗೆಯುವುದರೊಂದಿಗೆ ಅಧಿಕ ಲಾಭ ಕೂಡ ಸಾಧ್ಯ ಎಂದು ಅವರು ತಿಳಿಸಿದರು.
ತಮಿಳುನಾಡು ಕೃಷಿ ವಿಶ್ವವಿದ್ಯಾಲಯ, ಫಿಲಿಫೈನ್ಸ್‌ನ ಅಂತಾರಾಷ್ಟ್ರೀಯ ಭತ್ತ ಸಂಶೋಧನಾ ಸಂಸ್ಥೆ ಹಾಗೂ ಮೆಕ್ಸಿಕೋದ ಅಂತಾರಾಷ್ಟ್ರೀಯ ಮೆಕ್ಕೆ ಜೋಳ ಮತ್ತು ಗೋಧಿ ಅಭಿವೃದ್ಧಿ ಕೇಂದ್ರದ ಜಂಟಿ ಸಹಯೋಗದೊಂದಿಗೆ ಈ ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ.
|