ದೇಶದ ಹಲವು ಭಾಗಗಳಲ್ಲಿ ಇನ್ನೂ ಸಾಕಷ್ಟು ಮಳೆಯಾಗದ ಕಾರಣದಿಂದಾಗಿ ದಿನ ಬಳಕೆಯ ವಸ್ತುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಧಾನ್ಯಗಳು, ಆಲೂಗಡ್ಡೆ ಮತ್ತು ಮೆಣಸು ದುಬಾರಿಯಾಗುತ್ತಿದೆ.
ಕಡಲೆ ಬೇಳೆಯು ದೆಹಲಿ ಮಾರುಕಟ್ಟೆಯಲ್ಲಿ ಶೇಕಡಾ 14.6ರಷ್ಟು ಏರಿಕೆಯಾಗಿದ್ದು, ಪ್ರತೀ ಕ್ವಿಂಟಾಲ್‌ಗೆ 2,520 ರೂಪಾಯಿಗಳನ್ನು ದಾಖಲಿಸಿದೆ. ಇದು ಕೇವಲ ಒಂದು ವಾರದಲ್ಲಾದ ಬದಲಾವಣೆ ಎಂಬುದು ಗಮನಾರ್ಹ.
ಬಟಾಣಿ ಬೆಲೆ ಭರ್ಜರಿ ಶೇಕಡಾ 20ರ ಏರಿಕೆ ಕಂಡಿದೆ. "ಮುಂಗಾರು ಬೆಳೆ ತಡವಾಗಿರುವ ಕಾರಣ ಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಮುಂಗಾರು ಮಳೆಯು ಅತ್ಯುತ್ತಮವಾಗಿಲ್ಲ. ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರಿರಬಹುದು" ಎಂದು ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಜೂನ್ ನಂತರ ಆಲೂಗಡ್ಡೆ ದರದಲ್ಲಿ ಶೇಕಡಾ 20 ಏರಿಕೆಯಾಗಿದೆ. ಮೆಣಸು ಕೂಡ ಶೇಕಡಾ 16ರಷ್ಟು ದುಬಾರಿಯಾಗಿದೆ. ಜೂನ್ ಒಂದರ ಸಮಯಕ್ಕೆ ಆಲೂಗಡ್ಡೆ ಪ್ರತಿ ಕ್ವಿಂಟಾಲ್‌ಗೆ 856.10 ರೂಪಾಯಿಗಳಷ್ಟೇ ಇತ್ತು. ಈಗ ಅದರ ಬೆಲೆ 1,028.80 ರೂಪಾಯಿಗಳಾಗಿದೆ.
"ಬೆಲೆಯೇರಿಕೆಗೆ ಮಳೆ ಕೂಡ ಒಂದು ಪ್ರಮುಖ ಕಾರಣ. ಸಾಮಾನ್ಯವಾಗಿ ಒಟ್ಟಾರೆ ಜಮೀನಿನ ಬಿತ್ತನೆ ಆಧಾರ ಮೇಲೆ ಬೆಲೆ ನಿರ್ಧಾರಗೊಳ್ಳುತ್ತದೆ. ಆದರೆ ಈ ವರ್ಷ ಬಿತ್ತನೆಯಾದ ಜಮೀನುಗಳ ವ್ಯಾಪ್ತಿ ಕಡಿಮೆಯಾಗಿದೆ" ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಳೆ ಕಡಿಮೆಯಾಗಿರುವ ಕಾರಣದಿಂದಾಗಿ ಧಾನ್ಯಗಳು ಮತ್ತು ಎಣ್ಣೆ ಬೀಜಗಳ ಬೆಲೆಯಲ್ಲೂ ಏರಿಕೆಯಾಗಿದೆ. ಕಡಲೆ ಬೇಳೆ, ಸಾಸಿವೆ, ಸೋಯಾಬೀನ್, ನೆಲಗಡಲೆ ಮುಂತಾದ ದಿನ ಬಳಕೆಯ ವಸ್ತುಗಳೂ ದುಬಾರಿಯಾಗಿವೆ ಎಂದು ಮಾರುಕಟ್ಟೆ ವಲಯಗಳು ತಿಳಿಸಿವೆ.
|