ಸತತ ನಾಲ್ಕು ಬಾರಿ ವೈಮಾನಿಕ ಇಂಧನ ಬೆಲೆಯಲ್ಲಿ ಏರಿಕೆ ಮಾಡಿದ ನಂತರ ಇದೀಗ ಅಂತಾರಾಷ್ಟ್ರೀಯ ದರಗಳನ್ನು ಗಮನದಲ್ಲಿಟ್ಟುಕೊಂಡ ಸಾರ್ವಜನಿಕ ಸ್ವಾಮ್ಯದ ತೈಲ ಕಂಪನಿಗಳು ಶೇಕಡಾ 5.7ರ ಕಡಿತ ಪ್ರಕಟಿಸಿವೆ.
ವೈಮಾನಿಕ ಇಂಧನ ಬೆಲೆಯು ದೆಹಲಿಯಲ್ಲಿ ಪ್ರತೀ ಕಿಲೋ ಲೀಟರ್‌ನಲ್ಲಿ 2,221 ರೂಪಾಯಿ ಕಡಿಮೆಯಾಗಿದ್ದು, 36,338 ರೂಪಾಯಿಗಳಲ್ಲಿದೆ. ಇದು ಇಂದು ಮಧ್ಯರಾತ್ರಿಯ ನಂತರ ಜಾರಿಗೆ ಬರಲಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯನ್ನು ಆಧರಿಸಿ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂಗಳು ಕಳೆದೆರಡು ತಿಂಗಳಲ್ಲಿ ನಾಲ್ಕು ಬಾರಿ ವೈಮಾನಿಕ ಇಂಧನ ಬೆಲೆಯನ್ನು ಏರಿಕೆ ಮಾಡಿದ್ದವು.
ಮೇ 1ರಂದು 31,614.51 ರೂಪಾಯಿಗಳಿದ್ದ ವೈಮಾನಿಕ ಇಂಧನ ಬೆಲೆಯು ಸತತ ನಾಲ್ಕು ಬೆಲೆ ಏರಿಕೆಯಿಂದಾಗಿ ಜುಲೈ 1ರ ಅವಧಿಗೆ 38,557.56 ರೂಪಾಯಿಗಳನ್ನು ತಲುಪಿತ್ತು.
"ಅಂತಾರಾಷ್ಟ್ರೀಯ ದರಗಳು ನಂತರ ಕಡಿಮೆಯಾಗಿವೆ" ಎಂದು ಕಂಪನಿಗಳು ತಿಳಿಸಿವೆ. ಭಾರತವು ಜುಲೈ ತಿಂಗಳಲ್ಲಿ ಕಚ್ಚಾ ತೈಲವನ್ನು ಪ್ರತೀ ಬ್ಯಾರೆಲ್‌ಗೆ 63.42 ಅಮೆರಿಕನ್ ಡಾಲರ್‌ಗಳಂತೆ ಖರೀದಿಸಿತ್ತು. ಅದಕ್ಕಿಂತ ಮೊದಲು ಇದರ ಪ್ರಮಾಣ 69 ಡಾಲರುಗಳಾಗಿತ್ತು.
ಇಂದು ಮಧ್ಯರಾತ್ರಿಯ ನಂತರ ಕೊಲ್ಕತ್ತಾದಲ್ಲಿ ಈಗಿರುವ 46,710.92 ರೂಪಾಯಿಗಳಿಂದ 44,411 ರೂಪಾಯಿಗಳಿಗೆ ಪ್ರತಿ ಲೀಟರ್ ವೈಮಾನಿಕ ಇಂಧನ ಲಭ್ಯವಾಗಲಿದೆ. ಚೆನ್ನೈಯಲ್ಲಿ 2,360 ರೂಪಾಯಿಗಳ ಇಳಿಕೆಯಿಂದಾಗಿ 40,164 ರೂಪಾಯಿಗಳಿಗೆ ಪ್ರತಿ ಲೀಟರ್ ಇಂಧನ ಸಿಗುತ್ತದೆ.
ದೇಶದ ಅತೀ ನಿಬಿಢ ಪ್ರದೇಶ ಮುಂಬೈಯಲ್ಲಿ 39,789.02 ರೂಪಾಯಿಗಳಿದ್ದ ವೈಮಾನಿಕ ತೈಲ ದರವು ಇದೀಗ 37,475 ರೂಪಾಯಿಗಳಿಗೆ ಕುಸಿದಿದೆ.
ವೈಮಾನಿಕ ಇಂಧನ ಬೆಲೆಯಲ್ಲಿ ಇಳಿಕೆಯಾಗಿರುವುದು ಶೇಕಡಾ 40ರಷ್ಟು ವಿಮಾನಯಾನ ಸಂಸ್ಥೆಗಳ ಮೇಲೆ ಪರಿಣಾಮ ಬೀರಲಿದೆ. ಅವುಗಳ ನಿರ್ವಹಣಾ ವೆಚ್ಚವು ಮುಂದಿನ ದಿನಗಳಲ್ಲಿ ಕಡಿಮೆಯಾಗಲಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ಕಂಪನಿಗಳು ಚೇತರಿಕೆ ಕಾಣಬಹುದು ಎಂದು ಉದ್ಯಮ ಅಭಿಪ್ರಾಯಪಟ್ಟಿದೆ.
|