ಹೊರದೇಶಗಳ 355 ಉದ್ಯೋಗದಾತರು ವಿದೇಶದಲ್ಲಿ ಭಾರತೀಯ ಕೆಲಸಗಾರರಿಗೆ ಕಿರುಕುಳ ಕೊಡುತ್ತಿದ್ದುದನ್ನು ಸರಕಾರ ಪತ್ತೆ ಹಚ್ಚಿದೆ ಎಂದು ಲೋಕಸಭೆಗೆ ಇಂದು ಮಾಹಿತಿ ನೀಡಲಾಯಿತು.
"ಭಾರತೀಯ ಕೆಲಸಗಾರರಿಗೆ ಕಿರುಕುಳ ನೀಡುವ ವಿದೇಶದಲ್ಲಿನ ಸಂಸ್ಥೆಗಳನ್ನು ಅನುಮತಿ ಪೂರ್ವ ವಿಭಾಗದಲ್ಲಿ ಗುರುತಿಸಲಾಗುತ್ತದೆ. ಪ್ರಸಕ್ತ 355 ವಿದೇಶಿ ಉದ್ಯೋಗದಾತರು ಈ ಅನುಮತಿ ಪೂರ್ವ ವಿಭಾಗ ಪಟ್ಟಿಯಲ್ಲಿದ್ದಾರೆ" ಎಂದು ಸಾಗರೋತ್ತರ ವ್ಯವಹಾರಗಳ ಖಾತೆ ಸಚಿವ ವಯಲಾರ್ ರವಿ ತಿಳಿಸಿದ್ದಾರೆ.
ನೇಮಕಾತಿ ಏಜೆಂಟರು ಮತ್ತು ವಿದೇಶಿ ಉದ್ಯೋಗದಾತರು ಶೋಷಣೆ ನಡೆಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಭಾರತೀಯ ನಿಯೋಗವು ಅಲ್ಲಿ ತನಿಖೆಗಳನ್ನು ನಡೆಸಿದ್ದು, ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದೂ ಅವರು ಮಾಹಿತಿ ನೀಡಿದರು.
ಭಾರತೀಯ ಕಾರ್ಮಿಕರನ್ನು ಶೋಷಣೆ ಮತ್ತು ಭ್ರಷ್ಟಾಚಾರಗಳಿಂದ ರಕ್ಷಿಸುವ ಸಲುವಾಗಿ ಅರಬ್ ರಾಷ್ಟ್ರಗಳು, ಕುವೈಟ್, ಒಮನ್, ಬಹ್ರೈನ್ ಮತ್ತು ಮಲೇಷಿಯಾಗಳೊಂದಿಗೆ ಭಾರತವು ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದೆ ಎಂಬುದನ್ನೂ ರವಿ ತಿಳಿಸಿದ್ದಾರೆ.
|