ಅನಿವಾಸಿಗಳು ಸೇರಿದಂತೆ ಮೂಲ ಆದಾಯದಲ್ಲಿ ತೆರಿಗೆ ಕಡಿತ (ಟಿಡಿಎಸ್) ವ್ಯಾಪ್ತಿಯಲ್ಲಿ ಬರುವ ಎಲ್ಲಾ ತೆರಿಗೆದಾರರು ಕಡ್ಡಾಯವಾಗಿ ಸರಿಯಾದ ಶಾಶ್ವತ ಅಕೌಂಟ್ ನಂಬರ್ (ಪಾನ್) ನಮೂದಿಸಬೇಕು; ತಪ್ಪಿದಲ್ಲಿ ಹೆಚ್ಚಿನ ತೆರಿಗೆ ಪಾವತಿ ಮಾಡಬೇಕಾಗುತ್ತದೆ ಎಂದು ಸರಕಾರ ತಿಳಿಸಿದೆ.
"ತೆರಿಗೆ ಮುಕ್ತರಾಗಬೇಕಾದ ವ್ಯಕ್ತಿಯು ಕಡ್ಡಾಯವಾಗಿ ನೀಡಬೇಕಾದ ತನ್ನ ಪಾನ್ ನಂಬರನ್ನು ಒಪ್ಪಿಸಲು ವಿಫಲವಾದಲ್ಲಿ ಗರಿಷ್ಠ ಮಟ್ಟದಲ್ಲಿ ಆದಾಯ ತೆರಿಗೆ ಕಡಿತಕ್ಕೊಳಗಾಗುತ್ತಾನೆ" ಎಂದು 2009-10ರ ಸಾಲಿನ ಹಣಕಾಸು ವಿಧೇಯಕದಲ್ಲಿ ಹೇಳಲಾಗಿದೆ.
ಪಾನ್ ನಂಬರ್ ನಮೂದಿಸದವರ ಮೇಲೆ ಮುಂದಿನ ವರ್ಷದ ಏಪ್ರಿಲ್ 1ರಿಂದ ಗರಿಷ್ಠ ತೆರಿಗೆ ದರ ವಿಧಿಸಲು ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪವನ್ನೂ ಸರಕಾರ ಮಾಡಿದೆ.
ಮೂಲ ಆದಾಯದಲ್ಲಿ ತೆರಿಗೆ ಕಡಿತ ವ್ಯಾಪ್ತಿಯಲ್ಲಿ ಬರುವ ತೆರಿಗೆದಾರ ತನ್ನ ಪಾನ್ ನಂಬರನ್ನು ನಮೂದಿಸದೇ ಇದ್ದ ಪಕ್ಷದಲ್ಲಿ ಆತನ ಮೇಲೆ ಬಲವಂತ ಅಥವಾ ಶೇಕಡಾ 20ರ ತೆರಿಗೆಯನ್ನು ವಿಧಿಸಲಾಗುತ್ತದೆ ಎಂದು ಈ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
ಬಡ್ಡಿ ಆದಾಯ ಹೊಂದಿರುವವರು ಅಥವಾ ತೆರಿಗೆ ಪಾವತಿಸಬೇಕಾಗಿಲ್ಲದ ಇತರ ಆದಾಯ ಹೊಂದಿರುವವರು 15ಎ ಅರ್ಜಿ ನಮೂನೆಯಲ್ಲಿ ಮತ್ತು ಹಿರಿಯ ನಾಗರಿಕರು ಅಥವಾ ಪಿಂಚಣಿದಾರರು 15ಎಚ್ ಅರ್ಜಿ ನಮೂನೆಯಲ್ಲಿ ತಾವು ತೆರಿಗೆಯಿಂದ ಮುಕ್ತರಾಗಲು ಬಯಸುವುದಾದರೆ ತಮ್ಮ ಪಾನ್ ನಂಬರನ್ನು ನಮೂದಿಸಬೇಕು.
ಇದಲ್ಲದೆ ಮೂಲ ಆದಾಯ ತೆರಿಗೆ ವಿನಾಯಿತಿಗೆ ಅರ್ಹರಾಗುವ ಅನಿವಾಸಿಗಳು ದೇಶದಲ್ಲಿ ಯಾವುದೇ ವ್ಯವಹಾರ ನಡೆಸುವುದಿದ್ದರೂ ಕೂಡ ಇದೇ ನಿಯಮಾವಳಿಗಳಡಿಯಲ್ಲಿ ಬರುತ್ತಾರೆ.
|