ಪ್ರಮುಖವಾಗಿ ಇಂಧನ ದರ ಏರಿಕೆಯ ಪರಿಣಾಮದಿಂದಾಗಿ ಕಳೆದ ವಾರ ಶೇ. (-)1.55ರಲ್ಲಿದ್ದ ಹಣದುಬ್ಬರ ದರವು ಜುಲೈ 4ಕ್ಕೆ ಕೊನೆಗೊಂಡ ವಾರದಲ್ಲಿ ಆಂಶಿಕ ಏರಿಕೆಯನ್ನು ದಾಖಲಿಸಿದ್ದು, ಶೇ.(-)1.21ಕ್ಕೆ ತಲುಪಿದೆ.
ಕಳೆದ ವರ್ಷದ ಇದೇ ವಾರದಲ್ಲಿ ಸಗಟು ಸೂಚ್ಯಂಕ ದರವು ಶೇಕಡಾ 12.19ರ ಗರಿಷ್ಠ ಮಟ್ಟವನ್ನು ತಲುಪಿತ್ತು. ಆದರೆ ಈ ಬಾರಿ ಕಳೆದ ಐದು ವಾರಗಳಿಂದ ಹಣದುಬ್ಬರ ದರವು ಋಣಾತ್ಮಕ ಚಲನೆಯಲ್ಲೇ ಮುಂದುವರಿದಿದೆ.
ಜುಲೈ ಒಂದರ ನಂತರ ಇಂಧನ ಬೆಲೆಯನ್ನು ಏರಿಸುವ ನಿರ್ಧಾರವನ್ನು ಸರಕಾರ ತೆಗೆದುಕೊಂಡ ನಂತರ ಇಂಧನ, ಶಕ್ತಿ, ಬೆಳಕು ಮತ್ತು ಕೀಲೆಣ್ಣೆ ಸೂಚ್ಯಂಕವು ಶೇ.3.1ರ ಏರಿಕೆಯಾಗಿದೆ. ನಾಫ್ತಾ ಶೇ.15, ಫರ್ನೇಸ್ ಶೇ.11, ಪೆಟ್ರೋಲ್ ಶೇ.10, ಹೈ-ಸ್ಪೀಡ್ ಡೀಸೆಲ್ ಶೇ.7 ಹಾಗೂ ಸಾದಾ ಡೀಸೆಲ್ ಶೇ.4ರಷ್ಟು ಹೆಚ್ಚಳ ದಾಖಲಾದುದರಿಂದ ಸೂಚ್ಯಂಕ ಏರಿಕೆಗೆ ಕಾರಣವಾಯಿತು.
ಕಚ್ಚಾ ತೈಲ ಬೆಲೆ ದುಬಾರಿಯಾದ ಹಿನ್ನಲೆಯಲ್ಲಿ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 4 ಮತ್ತು 2 ರೂಪಾಯಿಗಳಂತೆ ಏರಿಕೆ ಮಾಡಿತ್ತು.
ಸಾಗರೋತ್ಪನ್ನಗಳ ಬೆಲೆ ಕುಸಿತವಾದ (ಶೇ.9) ಕಾರಣ ಆಹಾರ ವಸ್ತುಗಳ ಸೂಚ್ಯಂಕವು ಶೇ.0.2ರ ಹಿನ್ನಡೆ ದಾಖಲಿಸಿದೆ. ರಾಗಿ ಹಾಗೂ ಫಲವಸ್ತುಗಳು ಮತ್ತು ತರಕಾರಿಗಳು ಕೂಡ ಶೇ.1ರಂತೆ ಹಿನ್ನಡೆ ಅನುಭವಿಸಿವೆ.
ಆದರೆ ಕಾಫಿ (ಶೇ.15), ಬೇಳೆಕಾಳು (ಶೇ.3), ಮೆಕ್ಕೆ ಜೋಳ (ಶೇ.2) ಹಾಗೂ ಮಸಾಲೆ ಪದಾರ್ಥಗಳು ಮತ್ತು ಸಂಬಾರ ಪದಾರ್ಥಗಳು (ಶೇ.1) ಗಮನಾರ್ಹ ಏರಿಕೆ ದಾಖಲಿಸಿವೆ.
ಆಹಾರೇತರ ವಸ್ತುಗಳ ಬೆಲೆಯಲ್ಲಿ ಶೇಕಡಾ 0.3ರ ಏರಿಕೆ ದಾಖಲಾಗಿದೆ. ಎಳ್ಳು ಬೀಜದಲ್ಲಿ ಶೇ.18, ಹತ್ತಿ ಬೀಜದಲ್ಲಿ ಶೇ.6ರ ಹೆಚ್ಚಳವಾದ ಹಿನ್ನಲೆಯಲ್ಲಿ ಈ ಬದಲಾವಣೆ ಕಂಡು ಬಂದಿದೆ. ಆದರೆ ಹಸಿ ರೇಷ್ಮೆ ಮತ್ತು ಸೋಯಾಬೀನ್‌ಗಳು ಶೇ.3ರಂತೆ ಹಾಗೂ ಕಚ್ಚಾ ರಬ್ಬರ್ ಶೇ.1ರಂತೆ ಹಿನ್ನಡೆ ಕಂಡಿವೆ.
|