ವರ್ಷದ ಹಿಂದೆ ಅಗ್ಗದ ಕಾರಿನ ಘೋಷಣೆ ಮಾಡಿದ್ದ ಟಾಟಾ ಮೋಟಾರ್ಸ್ ಅಧ್ಯಕ್ಷ ರತನ್ ಟಾಟಾ, ಶುಕ್ರವಾರ ಮುಂಬೈಯ ಪ್ರಭಾದೇವಿಯಲ್ಲಿನ ಶೋ ರೂಮ್‌ನಲ್ಲಿ ಮೊದಲ ನ್ಯಾನೋ ಕಾರನ್ನು ಗ್ರಾಹಕರೋರ್ವರಿಗೆ ಹಸ್ತಾಂತರ ಮಾಡಲಿದ್ದಾರೆ. ದೇಶಾದ್ಯಂತ ಜುಲೈ ಅಂತ್ಯದೊಳಗೆ ಆಯ್ದ ಲಕ್ಷ ಗ್ರಾಹಕರಿಗೆ ನ್ಯಾನೋ ವಿತರಣೆ ಆರಂಭವಾಗಲಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ.ಕಳೆದ ವರ್ಷದ ಜನವರಿಯಲ್ಲಿ ರತನ್ ಟಾಟಾ ತನ್ನ ನೂತನ ಅಗ್ಗದ ನ್ಯಾನೋ ಕಾರನ್ನು ದೆಹಲಿಯಲ್ಲಿನ ಅಟೋ ಶೋದಲ್ಲಿ ಪ್ರದರ್ಶಿಸಿದ್ದರು. ಆದರೆ ನಂತರದ ದಿನಗಳಲ್ಲಿ ಪಶ್ಚಿಮ ಬಂಗಾಲದಲ್ಲಿನ ಕಾರು ತಯಾರಿಕಾ ಘಟಕವನ್ನು ಸ್ಥಳಾಂತರಿಸಬೇಕಾದ ಕಾರಣದಿಂದಾಗಿ ಯೋಜನೆಯು ತಡವಾಗಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಿದ್ದ ಟಾಟಾ, ಲಾಟರಿ ಮೂಲಕ ಗ್ರಾಹಕರನ್ನು ಆರಿಸಿತ್ತು. ಪಶ್ಚಿಮ ಬಂಗಾಲದಿಂದ ಕಾರು ಘಟಕವನ್ನು ಗುಜರಾತ್‌ಗೆ ಸ್ಥಳಾಂತರಿಸಲಾಗಿದ್ದರೂ ಸಹ ನ್ಯಾನೋ ಕಾರಿನ ಮೊದಲ ಬ್ಯಾಚ್ ಉತ್ತರ ಭಾರತದ ಪಂತ್ ನಗರದಿಂದ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.ಪಂತ್ ನಗರದಲ್ಲಿನ ಘಟಕದಲ್ಲಿ ವರ್ಷಕ್ಕೆ ಒಂದು ಲಕ್ಷ ಕಾರುಗಳನ್ನಷ್ಟೇ ಉತ್ಪಾದಿಸಲು ಸಾಧ್ಯವಿದೆ. ಗುಜರಾತ್‌ನ ಘಟಕವೂ ಕಾರ್ಯಾರಂಭ ಮಾಡಿದಲ್ಲಿ ವರ್ಷಕ್ಕೆ 2.5 ಲಕ್ಷ ಕಾರುಗಳನ್ನು ಬಿಡುಗಡೆ ಮಾಡಬಹುದು ಎಂದು ಕಂಪನಿ ತಿಳಿಸಿದೆ.ಮೊದಲ ಹಂತದಲ್ಲಿ ಕಾರುಗಳನ್ನು ಪಡೆಯಲು ಲಾಟರಿ ಮೂಲಕ ಆಯ್ಕೆಯಾದವರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಅಥವಾ ನೀಡಲಾಗುತ್ತಿದೆ. ಆ ಮೂಲಕ ವಿವಿಧ ನಗರಗಳಲ್ಲಿ ಜುಲೈಯಲ್ಲಿ ನ್ಯಾನೋ ವಿತರಣೆ ಆರಂಭಿಸಲಿರುವ ಟಾಟಾ ಆರೇಳು ತಿಂಗಳುಗಳೊಳಗೆ ಒಂದು ಲಕ್ಷ ಕಾರುಗಳನ್ನು ವಿತರಿಸಲಿದೆ ಎಂದು ಮೂಲಗಳು ತಿಳಿಸಿವೆ.ಒಂದು ಲಕ್ಷ ರೂಪಾಯಿ ಕಾರು ಎಂದೇ ಘೋಷಿಸಿದ್ದ ಟಾಟಾ ತನ್ನ ಮಾತನ್ನು ಉಳಿಸಿಕೊಂಡಿದೆ. ಮೊದಲ ಒಂದು ಲಕ್ಷ ಗ್ರಾಹಕರಿಗೆ ತೆರಿಗೆಗಳನ್ನು ಹೊರತುಪಡಿಸಿ ಒಂದು ಲಕ್ಷ ರೂಪಾಯಿಗಳಿಗೆ (2,053 ಡಾಲರ್) ಕಾರು ನೀಡುವುದಾಗಿ ಪ್ರಕಟಿಸಿದೆ. |