ಸಾಗರೋತ್ತರ ಗತಿಯ ಪ್ರಭಾವಕ್ಕೊಳಗಾದ ಮೂಲಗಳು ಖರೀದಿಗೆ ಮುಗಿ ಬಿದ್ದ ಕಾರಣ ಸತತ ಐದನೇ ದಿನವೂ ಏರಿಕೆ ದಾಖಲಿಸಿರುವ ಚಿನಿವಾರ ಪೇಟೆಯು 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದ್ದು, 10 ಗ್ರಾಂ ಚಿನ್ನದ ಬೆಲೆಯೀಗ 15,000 ರೂಪಾಯಿಗಳು.
ಇಂದು 130 ರೂಪಾಯಿಗಳ ಏರಿಕೆ ಕಂಡಿರುವ ಪ್ರತೀ 10 ಗ್ರಾಂ ಚಿನ್ನಕ್ಕೆ 15,040 ರೂಪಾಯಿಗಳು ದಾಖಲಾಗಿದ್ದು, ಈ ಹಂತ ಏಪ್ರಿಲ್ 2ರಂದು ಕಂಡು ಬಂದಿತ್ತು.
ಹಬ್ಬ-ಹರಿದಿನಗಳ ಕಾರಣ ಹೊಸ ಖರೀದಿಗಾಗಿ ಆಭರಣ ತಯಾರಕರು ಮತ್ತು ದಾಸ್ತಾನುದಾರರು ಪೈಪೋಟಿ ನಡೆಸಿದ ಕಾರಣ ಈ ಬಾರಿ ಚಿನಿವಾರ ಪೇಟೆಯು ದುಬಾರಿಯಾಗುತ್ತಿದೆ. ಕಳೆದ ಐದು ದಿನಗಳಲ್ಲಿ ಚಿನ್ನವು 340 ರೂಪಾಯಿಗಳ ಏರಿಕೆಯನ್ನು 10 ಗ್ರಾಂಗಳಲ್ಲಿ ಕಂಡಿದೆ.
ಇದೇ ರೀತಿಯ ಬದಲಾವಣೆ ಬೆಳ್ಳಿ ದರದಲ್ಲೂ ಕಂಡು ಬಂದಿದೆ. ಆಭರಣ ತಯಾರಕರು ಖರೀದಿಗೆ ಮುಂದಾಗಿದ್ದರಿಂದ ಬೆಳ್ಳಿಯಲ್ಲಿ 250 ರೂಪಾಯಿಗಳ ಏರಿಕೆಯಾಗಿದ್ದು, ಪ್ರತಿ ಕೆ.ಜಿ. ದರ 22,050 ರೂಪಾಯಿಗಳನ್ನು ತಲುಪಿದೆ.
ವಾರವನ್ನಾಧರಿಸಿದ ವಿತರಣೆಯಲ್ಲಿ 320 ರೂ.ಗಳ ಏರಿಕೆಯಾಗಿದ್ದು, 21,920 ರೂಪಾಯಿಗಳನ್ನು ಮುಟ್ಟಿದೆ. ಬೆಳ್ಳಿ ನಾಣ್ಯಗಳ ದರದಲ್ಲೂ 200 ರೂಪಾಯಿ ಏರಿಕೆಯಾಗಿದೆ. ಪ್ರತೀ 100 ಬೆಳ್ಳಿ ನಾಣ್ಯಗಳ ಖರೀದಿಗೆ 29,300 ಹಾಗೂ ಮಾರಾಟಕ್ಕೆ 29,400 ರೂಪಾಯಿಗಳನ್ನು ಮಾರುಕಟ್ಟೆ ದಾಖಲಿಸಿದೆ.
ಉತ್ಕೃಷ್ಟ ಚಿನ್ನ ಮತ್ತು ಆಭರಣ ದರದಲ್ಲಿ 130 ರೂ.ಗಳ ಏರಿಕೆಯಾಗಿದ್ದು, 10 ಗ್ರಾಂಗಳಿಗೆ ಕ್ರಮವಾಗಿ 15,040 ರೂಪಾಯಿ ಹಾಗೂ 14,890 ರೂಪಾಯಿಗಳನ್ನು ತಲುಪಿದೆ. ಪವನ್ ಚಿನ್ನ ದರವೂ 50 ರೂಪಾಯಿಗಳ ಏರಿಕೆ ಕಂಡಿದ್ದು, ಪ್ರತಿ ಎಂಟು ಗ್ರಾಂಗಳ ದರ 12,450 ರೂಪಾಯಿಗಳು.
|