ಖಾಸಗಿ ವಿಮಾನ ಯಾನ ಸಂಸ್ಥೆಗಳಿಗೆ ಪೈಪೋಟಿ ನೀಡಲಿರುವ ಏರ್ ಇಂಡಿಯಾ, ತನ್ನ ಕಡಿಮೆ ಪ್ರಯಾಣ ದರದ ವಿಮಾನಗಳನ್ನು ದೇಶೀಯ ವಲಯದಲ್ಲಿ ವಿಸ್ತರಿಸುವ ಯೋಚನೆಯಲ್ಲಿದೆ.
"ಅಗ್ಗದ ಪ್ರಯಾಣ ದರ ವಿಧಿಸುವ ದೇಶೀಯ ವಿಮಾನ ಯಾನ ಸಂಸ್ಥೆಗಳೊಂದಿಗೆ ಸ್ಪರ್ಧಿಸಲು ಮತ್ತು ಕೆಳ ಹಂತದ ಮಾರುಕಟ್ಟೆಯಲ್ಲೂ ನಮ್ಮ ಪಾಲನ್ನು ಖಚಿತಗೊಳಿಸುವುದಕ್ಕಾಗಿ ಏರ್ ಇಂಡಿಯಾವು ತನ್ನ ಕಡಿಮೆ ದರದ ದೇಶೀಯ ಸೇವೆಯಗಳನ್ನು ಇತರ ಮಾರ್ಗಗಳಿಗೂ ವಿಸ್ತರಿಸುವ ಕುರಿತು ಪರಿಗಣಿಸುತ್ತಿದೆ" ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.
ಏರ್ ಇಂಡಿಯಾ ತನ್ನ ಪೂರ್ಣ ಪ್ರಮಾಣದ ಸೇವೆಯನ್ನು ದೇಶೀಯ ವಲಯದಲ್ಲಿ ಮುಂದುವರಿಸಲಿರುವುದನ್ನು ಇದೇ ಸಂದರ್ಭದಲ್ಲಿ ಅವರು ಒತ್ತಿ ಹೇಳಿದ್ದಾರೆ.
ಏರ್ ಇಂಡಿಯಾದ 'ಏರ್ ಇಂಡಿಯಾ ಎಕ್ಸ್‌ಪ್ರೆಸ್' ಕಡಿಮೆ ಅಂತರದ ಅಂತಾರಾಷ್ಟ್ರೀಯ ಮಾರ್ಗಗಳಾದ ಗಲ್ಫ್ ರಾಷ್ಟ್ರಗಳು ಮತ್ತು ಆಗ್ನೇಯ ಏಷಿಯಾ ರಾಷ್ಟ್ರಗಳಿಗೆ ದೇಶದಿಂದ ಕಡಿಮೆ ಪ್ರಯಾಣ ದರದ ಸೇವೆ ಒದಗಿಸುತ್ತಿದೆ ಎಂದು ತಿಳಿಸಿದರು.
ಏರ್ ಇಂಡಿಯಾದ ಅಂತಾರಾಷ್ಟ್ರೀಯ ಸೇವೆಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಇಂಗಿತವಿಲ್ಲ ಎನ್ನುವುದನ್ನೂ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ವಿಮಾನಯಾನ ಸಂಸ್ಥೆ ಕಿಂಗ್ ಫಿಶರ್ ವಿಮಾನ ನಿಲ್ದಾಣದ ವೆಚ್ಚಗಳನ್ನು ಪಾವತಿ ಮಾಡಿಲ್ಲದಿರುವುದಕ್ಕೆ ನೊಟೀಸ್ ನೀಡಲಾಗಿರುವುದನ್ನೂ ಪಟೇಲ್ ಇದೇ ಸಂದರ್ಭದಲ್ಲಿ ತಿಳಿಸಿದರು. ವಿಜಯ ಮಲ್ಯ ಮಾಲಕತ್ವದ ಏರ್‌ಲೈನ್ಸ್ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪಾವತಿ ಮಾಡಬೇಕಾದ ಮೊತ್ತವನ್ನು ಬಾಕಿ ಇರಿಸಿಕೊಂಡಿದೆ.
|