ವರ್ಷಾಂತ್ಯದೊಳಗೆ ಹಣದುಬ್ಬರ ದರವು ಏರಿಕೆಯಾಗಲಿದ್ದು, ಶೇಕಡಾ ನಾಲ್ಕರಿಂದ ಐದರೊಳಗೆ ಸ್ಥಾನ ಕಂಡುಕೊಳ್ಳಲಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ತಿಳಿಸಿದ್ದಾರೆ.
"ನಾವು ಸಾಮಾನ್ಯ ಹಣದುಬ್ಬರದ ಪರವಾಗಿದ್ದೇವೆ. ಈ ವರ್ಷವನ್ನು ನಾವು ಶೇಕಡಾ ನಾಲ್ಕರಿಂದ ಐದರ ನಡುವೆ ಮುಗಿಸಲಿದ್ದೇವೆ" ಎಂದು ಮಾಂಟೆಕ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ವಾರಕ್ಕಿಂತ (-1.55%) ಜುಲೈ 4ಕ್ಕೆ ಕೊನೆಗೊಂಡ ವಾರದಲ್ಲಿ ಹಣದುಬ್ಬರ ದರವು ಆಂಶಿಕ ಏರಿಕೆ (-1.21%) ದಾಖಲಿಸಿರುವ ಹಿನ್ನಲೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಾಂಟೆಕ್, "ಈಗಿರುವ ಋಣಾತ್ಮಕ ಹಣದುಬ್ಬರ ದರವು ತಾತ್ಕಾಲಿಕವಾಗಿದೆ ಎಂದು ನಾನು ಆಗಾಗ ಹೇಳುತ್ತಲೇ ಬಂದಿದ್ದೇನೆ. ಶೀಘ್ರದಲ್ಲೇ ಇದು ಧನಾತ್ಮಕ ತಿರುವು ಪಡೆದುಕೊಳ್ಳಲಿದೆ. ಹಣದುಬ್ಬರವು ಕನಿಷ್ಟವಾಗಿದ್ದರೂ ಧನಾತ್ಮಕವಾಗಿರಬೇಕು. ದರ ಕುಸಿತವು ಅರ್ಥ ವ್ಯವಸ್ಥೆಗೆ ಒಳಿತಲ್ಲ" ಎಂದರು.
"ನಿರ್ದಿಷ್ಟ ವಸ್ತುಗಳ ಗರಿಷ್ಟ ಬೆಲೆ ಕಡಿಮೆಯಾಗಿರುವುದರಿಂದ ಸಮಸ್ಯೆಯಿಲ್ಲ. ಆದರೆ ಒಟ್ಟಾರೆ ದರ ಮಟ್ಟವನ್ನು ಗಮನಿಸಿದಾಗ ಇದು ಒಳಿತೆಂದು ಅನ್ನಿಸುತ್ತಿಲ್ಲ. ಶೇಕಡಾ ನಾಲ್ಕರಿಂದ ಐದರೊಳಗೆ ಹಣದುಬ್ಬರ ದರವು ಸ್ಥಿರವಾದರೆ ಸಹಜ ಸ್ಥಿತಿ ಎಂದು ಹೇಳಬಹುದು" ಎಂದು ಮಾಂಟೆಕ್ ವಿವರಿಸಿದ್ದಾರೆ.
ಹಣದುಬ್ಬರವು ಯಾವಾಗ ಧನಾತ್ಮಕ ತಿರುವು ಪಡೆದುಕೊಳ್ಳಬಹುದು ಎಂದಾಗ ಅವರು, "ಋಣಾತ್ಮಕ ಗತಿಯು ಕೆಲವು ವಾರಗಳ ಕಾಲ ಮುಂದುವರಿಯಬಹುದು ಎಂದು ನಾನು ಮೂರು ವಾರಗಳ ಹಿಂದೆ ಹೇಳಿದ್ದೆ. ಆದರೆ ಯಾವಾಗ ಇದು ಧನಾತ್ಮಕವಾಗಬಹುದು ಎಂದು ನಾನು ಖಚಿತವಾಗಿ ಹೇಳಲಾರೆ" ಎಂದರು.
|