ನಾಗರಿಕರಿಗೆ ವಿಶಿಷ್ಟ ಗುರುತಿನ ಚೀಟಿ ವಿತರಿಸುವ ಮಹತ್ವದ ಹುದ್ದೆಗೆ ಇನ್ನಷ್ಟೇ ಹೊರಳಬೇಕಿರುವ ನಂದನ್ ನಿಲೇಕಣಿಯವರನ್ನು ವಸ್ತುಶಃ ಬೆನ್ನಟ್ಟಿದ ಪತ್ರಕರ್ತರಲ್ಲಿ ಇನ್ಫೋಸಿಸ್‌ನ ಮಾಜಿ ಸಹಾಧ್ಯಕ್ಷ, ತಾನಿನ್ನೂ ಜವಾಬ್ದಾರಿ ವಹಿಸಿಕೊಂಡಿಲ್ಲ; ಕಾಲಾವಕಾಶ ಕೊಡಿ ಎಂದು ವಿನಂತಿಸಿಕೊಂಡಿದ್ದಾರೆ.
ಮಾಹಿತಿ ತಂತ್ರಜ್ಞಾನ ದೈತ್ಯ ಸಂಸ್ಥೆಗೆ ರಾಜಿನಾಮೆಯಿಟ್ಟು ಮಹತ್ವದ ಗುರುತಿನ ಚೀಟಿ ಯೋಜನೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿಕೊಳ್ಳಲಿರುವ ನಿಲೇಕಣಿ ಪತ್ರಕರ್ತರಿಂದ ಬಂದ ರಾಶಿ ಪ್ರಶ್ನೆಗಳಿಗೆ "ನನಗೆ ಸ್ವಲ್ಪ ಸಮಯ ನೀಡಿ... ಕಾಲಾವಕಾಶ ನೀಡಿ.." ಎಂದರು.
ದೇಶದ ನಾಗರಿಕರಿಗೆ ನೀಡಲಾಗುವ ಆನ್‌ಲೈನ್ ಆಧರಿತ ಗುರುತಿನ ಚೀಟಿ ವಿತರಣೆಗಾಗಿ ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ)ದ ಮುಖ್ಯಸ್ಥ ಹುದ್ದೆಗೆ ನಿಲೇಕಣಿಯವರನ್ನು ಕೇಂದ್ರ ಸರಕಾರವು ನೇಮಿಸಿತ್ತು.
ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಶಶಿ ತರೂರ್ ಭಾಗವಹಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿಲೇಕಣಿಯವರನ್ನು ಪತ್ರಕರ್ತರ ಒಂದು ಗುಂಪು ಸುತ್ತುವರಿದಿತ್ತು.
ಪದೇ ಪದೇ ಯೋಜನೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾರಂಭಿಸಿದಾಗ, ಮುಂದಿನ 12ರಿಂದ 18 ತಿಂಗಳಲ್ಲಿ ಮೊದಲ ಹಂತದ ಗುರುತಿನ ಚೀಟಿಯನ್ನು ವಿತರಿಸಲಾಗುತ್ತದೆ ಎಂದು ಈಗಾಗಲೇ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ತಿಳಿಸಿದ್ದಾರೆ ಎಂದರು.
ರೇಣುಕ ರಾಜಾ ರಾವ್ ಬರೆದ 'ಸ್ಟಡಿ ಇನ್ ಅಮೆರಿಕಾ: ದಿ ಡೆಫಿನೇಟ್ ಗೈಡ್ ಫಾರ್ ಇಂಟರ್‌ನ್ಯಾಷನಲ್ ಸ್ಟೂಡೆಂಟ್ಸ್' ಎಂಬ ಶೀರ್ಷಿಕೆಯ ಪುಸ್ತಕವನ್ನು ಈ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು.
|