ಸರ್ಚ್ ಇಂಜಿನ್ ದೈತ್ಯ ಗೂಗಲ್‌ನ ಭಾರತೀಯ ಇಂಜಿನಿಯರ್‌ಗಳ ತಂಡವು ಧ್ವನಿಯಾಧರಿತ ಮೊಬೈಲ್ ಅಂತರ್ಜಾಲ ಉಚಿತ ಶೋಧ ವ್ಯವಸ್ಥೆಯನ್ನು ಭಾರತದಲ್ಲಿ ಪರಿಚಯಿಸಿದೆ.
ಪ್ರಸಕ್ತ ಇದು ನಾಲ್ಕು ಲಕ್ಷ ಬ್ಲಾಕ್‌ಬೆರ್ರಿ ಮೊಬೈಲ್ ಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಾಗಬಹುದು ಎಂದು ಕಂಪನಿ ತಿಳಿಸಿದ್ದು, ವರ್ಷಾಂತ್ಯದೊಳಗೆ ಇತರ ಮೊಬೈಲ್‌ಗಳಿಗೂ ವಿಸ್ತರಿಸುವ ಭರವಸೆಯನ್ನು ಗೂಗಲ್ ನೀಡಿದೆ.
ಧ್ವನಿಯಾಧರಿತ ಮೊಬೈಲ್ ಶೋಧ ವ್ಯವಸ್ಥೆಯು ಕಂಪ್ಯೂಟರ್ ಆಧರಿತ ಶೋಧ ವ್ಯವಸ್ಥೆಯಂತಹುದೇ ಮಾದರಿಯನ್ನು ಅಳವಡಿಸಿಕೊಂಡಿದೆ. ಬಳಕೆದಾರರು ಮೊಬೈಲ್ ಮೂಲಕ ಇಂಟರ್ನೆಟ್ ಪ್ರವೇಶಿಸಿ, ಗೂಗಲ್ ಸರ್ಚ್ ಪೇಜ್ ಓಪನ್ ಮಾಡಬೇಕು. ನಂತರ ನಿಮಗೆ ಯಾವುದರ ಕುರಿತು ಹುಡುಕಬೇಕಿದೆ ಎಂಬುದನ್ನು ಮಾತಿನ ಮೂಲಕ ಹೇಳಬೇಕು.
ಉದಾಹರಣೆಗೆ ನೀವು ವಾಹನ ಚಲಾಯಿಸುತ್ತಿರುವ ಸಂದರ್ಭದಲ್ಲಿ ಬಿಗ್ ಬಜಾರ್, ಬಸ್ ನಿಲ್ದಾಣ, ನಿರ್ದಿಷ್ಟ ಆಸ್ಪತ್ರೆ ಅಥವಾ ಹವಾಮಾನದ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ ನಿರ್ದಿಷ್ಟ ಶಬ್ದವನ್ನು ಉಚ್ಛರಿಸಿದರೆ ಸಾಕು. ತಕ್ಷಣ ಸರ್ಚ್ ಇಂಜಿನ್ ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುತ್ತದೆ.
ಕೆಲವೇ ತಿಂಗಳುಗಳ ಹಿಂದಷ್ಟೇ ಗೂಗಲ್ ಇಂಡಿಯಾವು ಎಸ್‌ಎಂಎಸ್ ಆಧರಿತ ಶೋಧ ಸೇವೆಯನ್ನು ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ಹೈದರಾಬಾದ್, ದೆಹಲಿ, ಮುಂಬೈ ಮತ್ತು ಬೆಂಗಳೂರುಗಳಲ್ಲಿ ಆರಂಭಿಸಿತ್ತು. ಇದೀಗ ಪ್ರಕಟಿಸಿರುವ ಧ್ವನಿಯಾಧರಿತ ಮೊಬೈಲ್ ಇಂಟರ್ನೆಟ್ ಸರ್ಚ್ ಸೇವೆಯು ಇಂಗ್ಲೀಷ್‌ನಲ್ಲಿ ಮಾತ್ರ ಲಭ್ಯವಿದೆ ಎಂದು ಗೂಗಲ್ ತಿಳಿಸಿದೆ.
ಭಾರತದಲ್ಲಿನ ವಿಶಿಷ್ಟ ಮತ್ತು ಭಿನ್ನ ಉಚ್ಛಾರಣೆಯ ಕಾರಣದಿಂದಾಗಿ ಗೂಗಲ್ ತನ್ನ ಸರ್ಚ್ ಇಂಜಿನ್‌ಗಳಿಗೆ ಕಷ್ಟವಾಗುತ್ತಿರುವುದನ್ನು ಒಪ್ಪಿಕೊಂಡಿದೆ. ಆದರೆ ನಾವು ತಂತ್ರಾಂಶಗಳಲ್ಲಿ ಇನ್ನಷ್ಟು ಸುಧಾರಣೆ ತರುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದೇವೆ ಎಂದು ಗೂಗಲ್ ಇಂಡಿಯಾ ಉತ್ಪಾದನಾ ವಿಭಾಗದ ಮುಖ್ಯಸ್ಥ ವಿನಯ್ ಗೋಯೆಲ್ ತಿಳಿಸಿದ್ದಾರೆ.
|