ನಾಲ್ಕು ಸಾವಿರ ಕೋಟಿ ರೂಪಾಯಿಗಳ ನಷ್ಟದಲ್ಲಿರುವ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಕೇಂದ್ರ ಸರಕಾರದಿಂದ 2,500 ಕೋಟಿ ರೂಪಾಯಿಗಳ ರಕ್ಷಣಾ ಪ್ಯಾಕೇಜ್ ಪಡೆಯುವ ಸಾಧ್ಯತೆಯಿದೆ ಎಂದು ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ಹಣಕಾಸು ಸಂಕಷ್ಟಕ್ಕೊಳಗಾಗಿರುವ ವಿಮಾನಯಾನ ಸಂಸ್ಥೆಯು ಸಾಲದ ರೂಪದಲ್ಲಿ 2,500 ಕೋಟಿ ರೂಪಾಯಿಗಳನ್ನು ಸರಕಾರದಿಂದ ಪಡೆಯುವ ಸಾಧ್ಯತೆಯಿದೆ. ಇದನ್ನು ಏರ್ ಇಂಡಿಯಾ ಚೇತರಿಸಿಕೊಂಡ ನಂತರ ಮರು ಪಾವತಿಸಬೇಕಾಗುತ್ತದೆ ಎಂದು ದೆಹಲಿಯಲ್ಲಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸಚಿವರು ತಿಳಿಸಿದ್ದಾರೆ.
ಸರಕಾರಿ ಮಾಲಕತ್ವದ ರಾಷ್ಟ್ರೀಯ ವೈಮಾನಿಕ ಸಂಸ್ಥೆ (ಎನ್‌ಎಸಿಐಎಲ್)ಯ ಆಧೀನದಲ್ಲಿರುವ ಏರ್ ಇಂಡಿಯಾ ದಿನದಿಂದ ದಿನಕ್ಕೆ ಪಾತಾಳದತ್ತ ಸಾಗುತ್ತಿರುವ ಕಾರಣ ಭಾರತ ಸರಕಾರವು 14,000 ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ನೀಡಬೇಕೆಂದು ಕಳೆದ ತಿಂಗಳು ಕೇಳಿಕೊಂಡಿತ್ತು.
5,000 ಕೋಟಿ ರೂ. ಶೇರುಗಳ ಉತ್ತೇಜನಕ್ಕೆ, 2,000 ಕೋಟಿ ರೂ. ಸಹಾಯಧನ ಮತ್ತು 7,000 ಕೋಟಿ. ರೂಗಳನ್ನು ಸಾಲ ತೀರಿಸಲು ಸಾಲದ ರೂಪದಲ್ಲಿ ನೀಡುವಂತೆ ಎನ್‌ಎಸಿಐಎಲ್ ಸರಕಾರವನ್ನು ಕೇಳಿಕೊಂಡಿತ್ತು.
ಇದಕ್ಕೆ ಪ್ರತಿಕ್ರಿಯಿಸಿದ್ದ ಸಚಿವ ಪಟೇಲ್, ಸರಕಾರವು ಏರ್ ಇಂಡಿಯಾಕ್ಕೆ ರಕ್ಷಣಾ ಪ್ಯಾಕೇಜ್ ನೀಡಲಿದೆ; ಆದರೆ ಎನ್‌ಎಸಿಐಎಲ್ ಕೇಳಿದಂತೆ 14,000 ಅಥವಾ 15,000 ಕೋಟಿ ರೂ.ಗಳನ್ನು ನೀಡಲಾಗದು. ಅದಕ್ಕಿಂತ ಕಡಿಮೆ ಮೊತ್ತವನ್ನು ನೀಡುವ ಬಗ್ಗೆ ಯೋಚಿಸುತ್ತೇವೆ ಎಂದಿದ್ದರು.
ಏರ್ ಇಂಡಿಯಾದ ಶೇರು ಮೂಲವು ತೀರಾ ಕಡಿಮೆ ಹಂತದಲ್ಲಿದ್ದು, ಸರಕಾರವು ಶೇರು ಚೇತರಿಕೆಗೆ ಪೂರಕ ವ್ಯವಸ್ಥೆ ಮಾಡಲಿದೆ. ಏರ್ ಇಂಡಿಯಾವು ಮಾರುಕಟ್ಟೆಯಲ್ಲಿ ಅತ್ಯುತ್ತಮ ಪರಿಸ್ಥಿತಿ ಕಂಡುಕೊಂಡ ನಂತರ ನೀಡಲಾಗಿರುವ ಮೊತ್ತವನ್ನು ವಾಪಸು ಮಾಡಬೇಕಾಗುತ್ತದೆ ಎಂದು ಪಟೇಲ್ ತಿಳಿಸಿದ್ದಾರೆ.
|