ಮೂಲ ಆದಾಯದಲ್ಲಿ ತೆರಿಗೆ ಕಡಿತ (ಟಿಡಿಎಸ್) ಪಾವತಿಯನ್ನು ವಿಳಂಬಗೊಳಿಸಿದ ಕಾರಣಕ್ಕಾಗಿ ವಿಜಯ ಮಲ್ಯ ಮಾಲಕತ್ವದ ಕಿಂಗ್‌ಫಿಶರ್ ವಿಮಾನಯಾನ ಸಂಸ್ಥೆಗೆ 26 ಕೋಟಿ ರೂಪಾಯಿಗಳ ದಂಡವನ್ನು ಸರಕಾರ ವಿಧಿಸಿದೆ.
"ತೆರಿಗೆ ಪಾವತಿಯಲ್ಲಿ ವಿಳಂಬ ಮಾಡಿ ಕಾರಣಕ್ಕಾಗಿ ಕಿಂಗ್‌ಫಿಶರ್ ಏರ್‌ಲೈನ್ಸ್ ಪ್ರೈವೆಟ್ ಲಿಮಿಟೆಡ್‌ಗೆ 26.46 ಕೋಟಿ ರೂಪಾಯಿಗಳ ದಂಡ ವಿಧಿಸಲಾಗಿದೆ" ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹಣಕಾಸು ಖಾತೆಯ ರಾಜ್ಯ ಸಚಿವ ಎಸ್.ಎಸ್. ಪಳನಿಮಾನಿಕಮ್ ತಿಳಿಸಿದ್ದಾರೆ.
ಮೂಲ ಆದಾಯದಲ್ಲಿ ತೆರಿಗೆ ಕಡಿತ ಸಂಗ್ರಹಿತ ಮೊತ್ತವನ್ನು ಅವಧಿಯೊಳಗೆ ಪಾವತಿಸಲು ವಿಫಲವಾಗಿರುವ ಇತರ ಎರಡು ವಿಮಾನಯಾನ ಸಂಸ್ಥೆಗಳಾದ ಸ್ಪೈಸ್‌ಜೆಟ್ ಮತ್ತು ಎಂಡಿಎಲ್ಆರ್‌ಗಳನ್ನು ಹೆಸರಿಸಲಾಗಿದ್ದರೂ, ಅವುಗಳಿಗೆ ದಂಡ ವಿಧಿಸಲಾಗಿರುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿಯಾನ್ನು ನೀಡಲಾಗಿಲ್ಲ.
2007-08ರ ಸಾಲಿನ ಸ್ಪೈಸ್‌ಜೆಟ್ ಪ್ರೈವೆಟ್ ಲಿಮಿಟೆಡ್ ಟಿಡಿಎಸ್ ಮೊತ್ತ 7.74 ಕೋಟಿ ರೂಪಾಯಿಗಳು. 2008-09ರ ಸಾಲಿನಲ್ಲಿ 3.64 ಕೋಟಿ ರೂಪಾಯಿಗಳನ್ನು ಕಡಿತಗೊಳಿಸಲಾಗಿದ್ದು, ಸರಕಾರದ ಖಾತೆಗೆ ಜಮಾವನೆ ಮಾಡಲಾಗಿಲ್ಲ.
ಸ್ಪೈಸ್‌ಜೆಟ್ ಕೂಡ ಹಣ ಬಾಕಿ ಉಳಿಸಿಕೊಂಡಿದ್ದು, ಸರಕಾರಕ್ಕೆ 11.62 ಕೋಟಿ ರೂಪಾಯಿಗಳನ್ನು ತೆರಬೇಕಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕಿಂಗ್‌ಫಿಶರ್ ಸಂಸ್ಥೆಯಿಂದ ಏಪ್ರಿಲ್ 2008ರಿಂದ ನವೆಂಬರ್ 2008ರವರೆಗೆ 32.73 ಕೋಟಿ ರೂಪಾಯಿ ಮೊತ್ತದ ಟಿಡಿಎಸ್ ಕಡಿತಗೊಳಿಸಲಾಗಿದೆ. ಆದರೆ ಏಪ್ರಿಲ್ 2008ರಿಂದ ಮಾರ್ಚ್ 2009ರವರೆಗಿನ ಸರಕಾರಕ್ಕೆ ಪಾವತಿ ಮಾಡಬೇಕಾದ 35.31 ಕೋಟಿ ರೂಪಾಯಿಗಳನ್ನು ಸಂಸ್ಥೆ ಬಾಕಿ ಇರಿಸಿಕೊಂಡಿದೆ ಎಂದು ಸಚಿವರು ವಿವರಿಸಿದ್ದಾರೆ.
|