ಸೆಂಟ್ರಲ್ ಮುಂಬೈಯ ಪ್ರಭಾದೇವಿಯಲ್ಲಿನ ಟಾಟಾ ಶೋ ರೂಂ ಒಂದರಲ್ಲಿ ಗ್ರಾಹಕ ಅಶೋಕ್ ವಿಚಾರೆ ಎಂಬವರಿಗೆ ಟಾಟಾ ಮೋಟಾರ್ಸ್ ಅಧ್ಯಕ್ಷ ರತನ್ ಟಾಟಾ ಶುಕ್ರವಾರ ಕೀ ಹಸ್ತಾಂತರಿಸುವ ಮೂಲಕ ಅಗ್ಗದ ಕಾರು ನ್ಯಾನೋವನ್ನು ಜಗತ್ತಿಗೆ ಪರಿಚಯಿಸಿದ್ದಾರೆ.ಸಿಲ್ವರ್ ಬಣ್ಣದ ನ್ಯಾನೋ ಕಾರಿನ ಮೊದಲ ಕೀಯನ್ನು ಟಾಟಾರವರು ಅಶೋಕ್ ವಿಚಾರೆ ಎಂಬವರಿಗೆ ಹಸ್ತಾಂತರಿಸಿದರು. ಹಳದಿ ಬಣ್ಣದ ಎರಡನೇ ಕಾರಿನ ಕೀ ಆಶಿಶ್ ಬಾಲಕೃಷ್ಣನ್ ಹಾಗೂ ಮೂರನೇ ಕೀ ಕೋರಸ್ ಇಂಡಿಯಾ ಪಾಲಾಯಿತು. 65.5 ಬಿಲಿಯನ್ ಮೌಲ್ಯದ ಟಾಟಾ ಸಮೂಹದ ಮಾಲಕ ರತನ್ ನಾವಲ್ ಟಾಟಾರವರು ಭರವಸೆ ನೀಡಿದಂತೆ ಬಡವರ ಕಾರು ಎಂದೇ ಹೇಳಲಾಗಿದ್ದ ನ್ಯಾನೋವನ್ನು ಒಂದು ಲಕ್ಷ ರೂಪಾಯಿಗಳಿಗೆ ಹಸ್ತಾಂತರಿಸಿದ್ದಾರೆ. ಮೊದಲ ಹಂತದ ಒಂದು ಲಕ್ಷ ಕಾರುಗಳ ಗ್ರಾಹಕರಿಗೆ ಇದೇ ಬೆಲೆಯಲ್ಲಿ ನೀಡಲಾಗುತ್ತದೆ ಎಂದು ಟಾಟಾ ತಿಳಿಸಿದ್ದಾರೆ." ಒಂದು ಸ್ವಂತ ಮನೆ, ಒಂದು ಕಾರು ಕೊಳ್ಳುವುದು ಮತ್ತು ಸಂಸಾರವನ್ನು ನಡೆಸುವುದು - ಇವು ಜೀವನದ ಮೂರು ಪ್ರಮುಖ ಇಷ್ಟಗಳು. ನಾನು ಕಂಡಿದ್ದ ಎರಡನೇ ಕನಸು ಈಗ ನನಸಾಗಿದೆ. ಹಾಗಾಗಿ ಮೂರನೇ ಕನಸಿನ ಬಗ್ಗೆ ನನಗೆ ಭರವಸೆ ಹೆಚ್ಚಿದೆ. ಶೀಘ್ರದಲ್ಲೇ ಕೈಗೂಡುವ ವಿಶ್ವಾಸವಿದೆ" ಎಂದು ಬಾಲಕೃಷ್ಣನ್ ಪ್ರತಿಕ್ರಿಯಿಸಿದ್ದಾರೆ.ವಿಚಾರೆಯವರು ತನ್ನ ಕಾರನ್ನು ನೇರವಾಗಿ ಸಿದ್ಧಿ ವಿನಾಯಕ ಮಂದಿರಕ್ಕೆ ಚಾಲನೆ ನಡೆಸಿಕೊಂಡು ಹೋಗುವುದನ್ನು ಆರಿಸಿದ್ದಾರೆ.ಸಿಂಗೂರಿನಲ್ಲಿ ಭಾರೀ ಪ್ರತಿಭಟನೆಯನ್ನೆದುರಿಸಿದ ಕಾರಣ ನ್ಯಾನೋ ಘಟಕವನ್ನು ಪಶ್ಚಿಮ ಬಂಗಾಲದಿಂದ ಗುಜರಾತ್‌ಗೆ ವರ್ಗಾಯಿಸಲಾಗಿತ್ತು. ಇದೀಗ ಉತ್ತರ ಭಾರತದ ಪಂತ್ ನಗರದಲ್ಲಿ ಉತ್ಪಾದನೆಯಾದ ಕಾರುಗಳನ್ನು ಮೊದಲ ಹಂತದ ಗ್ರಾಹಕರಿಗೆ ವಿತರಿಸಲಾಗುತ್ತಿದೆ. ವರ್ಷಕ್ಕೆ 2.5 ಲಕ್ಷ ಕಾರುಗಳನ್ನು ಗ್ರಾಹಕರಿಗೆ ಒದಗಿಸುವ ಬಯಕೆಯನ್ನು ಟಾಟಾ ಇಟ್ಟುಕೊಂಡಿದೆ.ಗುಜರಾತ್ ಘಟಕದಲ್ಲಿ ನ್ಯಾನೋ ತಯಾರಿಕೆ ಇನ್ನಷ್ಟೇ ಆರಂಭವಾಗಬೇಕಿದೆ. ಈಗಾಗಲೇ ಲಾಟರಿ ಮೂಲಕ ಆಯ್ಕೆಯಾಗಿರುವ ಒಂದು ಲಕ್ಷ ಗ್ರಾಹಕರಿಗೆ ಇಂದಿನಿಂದ ಮಾರ್ಚ್ 2010ರೊಳಗೆ ಕಾರುಗಳನ್ನು ವಿತರಿಸಲಾಗುತ್ತದೆ ಎಂದು ಟಾಟಾ ಪ್ರಕಟಿಸಿದ್ದಾರೆ. |