ಅನಿಲ್ ಮತ್ತು ಮುಖೇಶ್ ಅಂಬಾನಿ ನಡುವಿನ ನೈಸರ್ಗಿಕ ಅನಿಲ ಪೂರೈಕೆ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರದ ಮಹತ್ವದ ಬೆಳವಣಿಗೆಯೊಂದರಲ್ಲಿ ಶುಕ್ರವಾರ ಕೇಂದ್ರ ಸರಕಾರವು ತನ್ನನ್ನೂ ವಾದಿಯನ್ನಾಗಿ ಪರಿಗಣಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದೆ.
ಸರಕಾರವನ್ನು ಈ ವಿವಾದದಲ್ಲಿ ಮಧ್ಯಸ್ತಿಕೆದಾರನಾಗಿ ಮಾತ್ರ ಪರಿಗಣಿಸಬೇಕೆಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮುಖೇಶ್ ಅಂಬಾನಿ ಮಾಲಕತ್ವದ ರಿಲಯೆನ್ಸ್ ಇಂಡಸ್ಟ್ರೀಸ್ ಮನವಿ ಸಲ್ಲಿಸಿದ ನಂತರ ಸರಕಾರವು ಈ ಮಹತ್ವದ ನಿರ್ಧಾರಕ್ಕೆ ಬಂದಿದೆ. ಕೇಂದ್ರ ಸರಕಾರವನ್ನು ಕೃಷ್ಣ ಗೋದಾವರಿ ನೈಸರ್ಗಿಕ ಅನಿಲ ವಿವಾದದಲ್ಲಿ ಒಂದು ವಾದಿಯನ್ನಾಗಿ ಪರಿಗಣಿಸಬೇಕೆಂದು ಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವಾಲಯವು ತಿಳಿಸಿದೆ.
ಅತ್ತ ಅಂಬಾನಿ ಸಹೋದರ ಅನಿಲ್ ನೇತೃತ್ವದ ಆರ್‌ಎನ್‌ಆರ್‌ಎಲ್ ಕೂಡ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಬಾಂಬೆ ಹೈಕೋರ್ಟ್ ತೀರ್ಪಿನಲ್ಲಿ ಬದಲಾವಣೆ ಮಾಡಬೇಕೆಂದು ಕೋರಿಕೊಂಡಿದೆ. ಕೆ.ಜಿ. ಬಾಸಿನ್‌ನಿಂದ ತನಗೆ 2.34 ಅಮೆರಿಕನ್ ಡಾಲರ್‌ನಂತೆ ಶೇಕಡಾ 44ಕ್ಕಿಂತಲೂ ಕಡಿಮೆ ಬೆಲೆಗೆ ಅನಿಲ ಪೂರೈಸಬೇಕೆಂದು ಆರ್‌ಐಎಲ್‌ಗೆ ಸೂಚಿಸಬೇಕೆನ್ನುವುದು ಅನಿಲ್ ಮಾಲಕತ್ವದ ಸಂಸ್ಥೆ ಮನವಿ ಮಾಡಿಕೊಂಡಿದೆ.
"ಇದರಲ್ಲಿ ಕೇಂದ್ರ ಸರಕಾರದ ಹಿತಾಸಕ್ತಿಯೂ ಅಡಗಿದ್ದು, ಬಾಂಬೆ ಹೈಕೋರ್ಟ್‌ನ ತೀರ್ಪಿನ ಹಿನ್ನಲೆಯಲ್ಲಿ ಸರಕಾರವನ್ನು ವಾದಿಯನ್ನಾಗಿ ಪರಿಗಣಿಸಬೇಕು. ಸರಕಾರವನ್ನು ವಾದಿಯನ್ನಾಗಿ ಪರಿಗಣಿಸುವುದರ ಮೂಲಕ ವಿವಾದವನ್ನು ಬಗೆಹರಿಸುವುದು ಕೂಡ ಸುಲಭವಾಗುತ್ತದೆ" ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯ ತನ್ನ ಮನವಿಯಲ್ಲಿ ತಿಳಿಸಿದೆ.
|