ಆಶಿಶ್ ಬಾಲಕೃಷ್ಣನ್ ಕಂಡಿದ್ದ ಟಾಟಾ ನ್ಯಾನೋ ಕಾರಿನ ಕನಸೇನೋ ಶುಕ್ರವಾರ ನಿಜವಾಯಿತು; ಆದರೆ ಸಂಜೆಯ ಹೊತ್ತಿಗೆ ಕಾರಿನ ಕೀಲಿಕೈ ಕಳೆದುಕೊಳ್ಳುವ ಮೂಲಕ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಸ್ಥಿತಿಯೀಗ ಅವರದ್ದು.ಸೆಂಟ್ರಲ್ ಮುಂಬೈಯ ಪ್ರಭಾದೇವಿಯಲ್ಲಿನ ಟಾಟಾ ಶೋ ರೂಂ ಒಂದರಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಟಾಟಾ ಮೋಟಾರ್ಸ್ ಅಧ್ಯಕ್ಷ ರತನ್ ಟಾಟಾರಿಂದ 29ರ ಹರೆಯದ ಅವಿವಾಹಿತ ಯುವಕ ಬಾಲಕೃಷ್ಣನ್ ಕಾರಿನ ಕೀ ಪಡೆದುಕೊಂಡಿದ್ದರು. ಎರಡನೇ ನ್ಯಾನೋ ಕಾರಿನ ಕೀ ಪಡೆದುಕೊಂಡಿದ್ದ ಅವರು, "ಒಂದು ಸ್ವಂತ ಮನೆ, ಒಂದು ಕಾರು ಕೊಳ್ಳುವುದು ಮತ್ತು ಸಂಸಾರವನ್ನು ನಡೆಸುವುದು - ಇವು ಜೀವನದ ಮೂರು ಪ್ರಮುಖ ಧ್ಯೇಯಗಳು. ನಾನು ಕಂಡಿದ್ದ ಎರಡನೇ ಕನಸು ಈಗ ನನಸಾಗಿದೆ. ಹಾಗಾಗಿ ಮೂರನೇ ಕನಸಿನ ಬಗ್ಗೆ ನನಗೆ ಭರವಸೆ ಹೆಚ್ಚಿದೆ. ಶೀಘ್ರದಲ್ಲೇ ಕೈಗೂಡುವ ವಿಶ್ವಾಸವಿದೆ" ಎಂದಿದ್ದರು.ಆದರೆ ಹೀಗೆ ಹೇಳಿದ ಸ್ವಲ್ಪ ಹೊತ್ತಿನಲ್ಲಿ ಅವರು ಕಾರಿನ ಕೀ ಕಳೆದುಕೊಂಡಿದ್ದರು.ಇದೀಗ ಟಾಟಾ ಮೋಟಾರ್ಸ್ ಬಾಲಕೃಷ್ಣನ್‌ರಿಗೆ ಶನಿವಾರ ಡುಪ್ಲಿಕೇಟ್ ಕೀಗಳನ್ನು ಹಸ್ತಾಂತರಿಸಲಿದೆ. ಅವರ ಕಸಿನ್ ಕಾರನ್ನು ಚಾಲನೆ ಮಾಡಿಕೊಂಡು ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಎಚ್‌ಡಿಎಫ್‌ಸಿ ಬ್ಯಾಂಕಿನ ಉದ್ಯೋಗಿಯಾಗಿರುವ ಬಾಲಕೃಷ್ಣನ್ ಕಾರಿನ ಸಂಪೂರ್ಣ ಮೌಲ್ಯವನ್ನು ಒಂದೇ ಕಂತಿನಲ್ಲಿ ನೇರ ಪಾವತಿ ಮಾಡಿದ ನಂತರ ಮುಂದಿನ ಜೀವನದ ಬಗ್ಗೆ ಆಶಾವಾದದ ಮಾತುಗಳನ್ನಾಡಿದ್ದರು. |