ಇತ್ತೀಚೆಗೆ ನೂರಾರು ಜನರ ಸಾವಿಗೆ ಕಾರಣವಾದ ಕಳ್ಳಭಟ್ಟಿ ದುರಂತದ ಹಿಂದೆ ಬೆಲ್ಲದ ಬೆಲೆ ಏರಿಕೆಯಾಗಿರುವ ಸಂಗತಿ ಬಯಲಿಗೆ ಬಂದಿದೆ. ಪ್ರಕರಣದ ಪ್ರಮುಖ ಆರೋಪಿ ವಿನೋದ್ ಚೌಹಾನ್ ಆಲಿಯಾಸ್ ಡಾಗ್ರಿ ಬೆಲ್ಲ ತುಟ್ಟಿಯಾದ ಕಾರಣ ಮಿಥೈಲ್ ಬಳಸಿ ಕೃತಕ ಮದ್ಯ ತಯಾರಿಸಿದ್ದ ವಿಚಾರವನ್ನೀಗ ಪೊಲೀಸರಲ್ಲಿ ಬಹಿರಂಗಪಡಿಸಿದ್ದಾನೆ.
ಕಳ್ಳಭಟ್ಟಿ ದುರಂತಕ್ಕೆ ನಿಜವಾದ ಕಾರಣ ಬೆಲ್ಲ ಬೆಲೆಯೇರಿಕೆ ಎಂದು ಪತ್ರಿಕೆಯೊಂದು ಕೆಲ ದಿನಗಳ ಹಿಂದೆ ವರದಿ ಮಾಡಿತ್ತು. ಕಳೆದ ವರ್ಷದಿಂದೀಚೆಗೆ ಬೆಲ್ಲ ಬೆಲೆ ದ್ವಿಗುಣಗೊಂಡಿದ್ದರ ಪರಿಣಾಮ ದೇಶೀಯ ಮದ್ಯದ ತಯಾರಿಕೆಯ ಕಚ್ಚಾ ವಸ್ತುಗಳು ಕೂಡ ದುಬಾರಿಯಾಗಿದ್ದವು.
ಪೊಲೀಸ್ ಮಹಾ ನಿರ್ದೇಶಕ ಎಸ್.ಎಸ್. ಖಂಡ್ವಾವಾಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕಳ್ಳಭಟ್ಟಿ ದುರಂತದ ವಿವರಣೆ ನೀಡಿದ್ದಾರೆ. ಅವರ ಪ್ರಕಾರ ಬೆಲ್ಲ ದುಬಾರಿಯಾಗಿರುವುದು ಕೂಡ ದುರ್ಘಟನೆಗೆ ಕಾರಣ.
ಕಳ್ಳಭಟ್ಟಿ ಮದ್ಯದ ಮಾರುಕಟ್ಟೆ ದರ ಪ್ರತೀ ಲೀಟರ್‌ಗೆ 20 ರೂಪಾಯಿ. ಇದನ್ನು ತಯಾರಿಸಲು 9.25 ರೂಪಾಯಿಗಳು ಖರ್ಚಾಗುತ್ತದೆ. ಬೆಲ್ಲದ ಬದಲು ಮಿಥೈಲ್ ಬಳಸಿದಲ್ಲಿ ಒಂದು ಲೀಟರ್ ಮದ್ಯ ತಯಾರಿಕೆ ವೆಚ್ಚ ಕೇವಲ 3.25 ರೂಪಾಯಿಯಾಗುತ್ತದೆ ಎಂದು ಪೊಲೀಸ್ ಮುಖ್ಯಸ್ಥ ತಿಳಿಸಿದ್ದಾರೆ.
ಕಳೆದ ವರ್ಷ ಪ್ರತಿ ಕಿಲೋ ಬೆಲ್ಲದ ಬೆಲೆ 15 ರೂಪಾಯಿಗಳಷ್ಟೇ ಇತ್ತು. ಆದರೆ ಆ ಬೆಲೆಯೀಗ ದ್ವಿಗುಣಗೊಂಡಿದ್ದು 30 ರೂಪಾಯಿಗಳಿಗಳನ್ನು ತಲುಪಿದೆ ಎಂದು ಅಹಮದಾಬಾದ್ ಬೆಲ್ಲ ಅಸೋಸಿಯೇಷನ್ ತಿಳಿಸಿದೆ.
|