ಕಂಪನಿ ನ್ಯಾಯ ಮಂಡಳಿಯ ಅನುಮತಿ ಹಿನ್ನಲೆಯಲ್ಲಿ ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯನ್ನು ಟೆಕ್ ಮಹೀಂದ್ರಾ ಸ್ವಾಧೀನಪಡಿಸಿಕೊಂಡ ಮೂರು ತಿಂಗಳ ನಂತರ ಸರಕಾರವು ತನ್ನ ನಾಲ್ಕು ಮಂದಿ ನಿರ್ದೇಶಕರನ್ನು ಸತ್ಯಂ ಮಂಡಳಿಯಿಂದ ಹಿಂದಕ್ಕೆ ಕರೆಸಿಕೊಂಡಿದೆ.
ಇದೀಗ ಮಹೀಂದ್ರ ಸತ್ಯಂ ಎಂದು ಹೆಸರು ಬದಲಾಯಿಸಿಕೊಂಡಿರುವ ಕಂಪನಿಯು ಭ್ರಷ್ಟಾಚಾರದಿಂದ ನಲುಗುತ್ತಿರುವ ಸಂದರ್ಭದಲ್ಲಿ ಸರಕಾರವು ನೆರವಿಗೆ ಬಂದು ಆರು ಮಂದಿ ನಿರ್ದೇಶಕರನ್ನು ನಾಮಕರಣಗೊಳಿಸಿತ್ತು. ಇದೀಗ ಅವರಲ್ಲಿ ಸಿ. ಅಚ್ಯುತ್ತನ್ ಮತ್ತು ಟಿ.ಎನ್. ಮನೋಹರನ್‌ರನ್ನು ಹೊರತುಪಡಿಸಿ ಉಳಿದವರನ್ನು ಹಿಂಪಡೆದಿದೆ.
ಜನವರಿ 9ರಂದು ಕಂಪನಿ ನ್ಯಾಯ ಮಂಡಳಿಯ (ಸಿಎಲ್‌ಬಿ) ಅನುಮತಿ ಪಡೆದಿದ್ದ ಕೇಂದ್ರ ಸರಕಾರವು, ಕಿರಣ್ ಕಾರ್ಣಿಕ್ ಅಧ್ಯಕ್ಷತೆಯ ನಿರ್ದೇಶಕರ ಮಂಡಳಿಯನ್ನು ಸ್ಥಾಪಿಸಿತ್ತು. ದೀಪಕ್ ಪಾರೆಖ್, ತರುಣ್ ದಾಸ್, ಸೂರ್ಯಕಾಂತ್ ಬಾಲಕೃಷ್ಣ ಮೈನಾಕ್‌ರನ್ನು ನಿರ್ದೇಶಕರ ಪಟ್ಟಿಗೆ ಸೇರಿಸಿತ್ತು.
ಇದೀಗ ಹೆಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪಾರೆಖ್, ನಾಸ್ಕಮ್ ಮಾಜಿ ಮುಖ್ಯಸ್ಥ ಕಿರಣ್ ಕಾರ್ಣಿಕ್, ಸಿಐಐಯ ಮುಖ್ಯ ಸಲಹೆಗಾರ ತರುಣ್ ದಾಸ್ ಮತ್ತು ಎಲ್‌ಐಸಿಯ ಸೂರ್ಯಕಾಂತ್ ಬಾಲಕೃಷ್ಣ ಮೈನಾಕ್‌ರನ್ನು ಸರಕಾರ ಹಿಂದಕ್ಕೆ ಕರೆಸಿಕೊಂಡಿದೆ. ಸೆಬಿ ಸದಸ್ಯ ಸಿ. ಅಚ್ಯುತ್ತನ್ ಮತ್ತು ಭಾರತೀಯ ಚಾರ್ಟೆಡ್ ಅಕೌಂಟೆಂಟ್‌ಗಳ ಸಂಘಟನೆಯ ಮಾಜಿ ಅಧ್ಯಕ್ಷ ಟಿ.ಎನ್. ಮನೋಹರನ್‌ರನ್ನು ನಿರ್ದೇಶಕರನ್ನಾಗಿ ಮುಂದುವರಿಸಿದೆ.
ಸತ್ಯಂ ಕಂಪನಿಯ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಸರಕಾರ ನೇಮಿಸಿರುವ ಈ ಎರಡೂ ನಿರ್ದೇಶಕರ ಉಪಸ್ಥಿತಿ ಆವಶ್ಯಕವಾಗಿದೆ. ಆದರೆ ಶೇರು ಖರೀದಿ ಒಪ್ಪಂದದ ಸಂದರ್ಭದಲ್ಲಿ ಒಬ್ಬ ನಿರ್ದೇಶಕರ ಹಾಜರಿ ಸಾಕಾಗುತ್ತದೆ ಎಂದು ಸಿಎಲ್‌ಬಿ ತಿಳಿಸಿದೆ.
ಅಚ್ಯುತ್ತನ್ ಮತ್ತು ಮನೋಹರನ್‌ರವರು ಮುಂದಿ ಮೂರು ವರ್ಷಗಳ ಕಾಲ ನಿರ್ದೇಶಕರ ಮಂಡಳಿಯಲ್ಲಿ ಮುಂದುವರಿಯಲಿದ್ದಾರೆ. ಆದರೆ ಇವರ ಸೇರ್ಪಡೆಯನ್ನು ಕಂಪನಿಯ ನಿರ್ದೇಶಕರ ಸಂಖ್ಯೆಗಿರುವ ಮಿತಿಗೆ ಸೇರಿಸಬಾರದು ಎಂದೂ ಹೇಳಲಾಗಿದೆ.
|